ಮೈಸೂರು, ಅ.15: ದಸರಾ ಆಚರಣೆ ಮೂಲಕ ಕನ್ನಡನಾಡಿನ ಪರಂಪರೆ ಮತ್ತು ಹಿರಿಮೆಗರಿಮೆಯನ್ನು ಜಗತ್ತಿಗೆ ಸಾರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಚಾಮುಂಡಿಬೆಟ್ಟದಲ್ಲಿ ನಡೆದ ದಸರಾ ಮಹೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ದಸರಾ ಹಬ್ಬ ವಿಜಯನಗರ ಸಾಮ್ರಾಜ್ಯದ ಆಚರಣೆ ಆಗಿತ್ತು. ಈ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು ಸೇರು ಬಳ್ಳ ಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು. ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ ಮೈಸೂರು ಅರಸರು ದಸರಾ ಹಬ್ಬವನ್ನು ಆಚರಣೆ ಮಾಡಲು ಪ್ರಾರಂಭಿಸಿದರು. ಈಗ ರಾಜ್ಯ ಸರ್ಕಾರ ಆಚರಣೆ ಮಾಡುತ್ತಿದೆ ಎಂದರು.
ಬರಗಾಲವಿದ್ದರೂ ನಮ್ಮ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದಂತೆ ಅರ್ಥಪೂರ್ಣ ದಸರಾ ಆಚರಿಸಲಾಗುವುದು. ನಮ್ಮ ಪರಂಪರೆ ಮತ್ತು ಹಿರಿಮೆಯನ್ನು ಜಗತ್ತಿಗೆ ಸಾರಲಾಗುವುದು.
ಕನ್ನಡ ನಾಡಿನ ಸಮೃದ್ಧಿ, ಪ್ರಗತಿ, ಸಂಸ್ಕೃತಿ ಮತ್ತು ವೈಭವವನ್ನು ದಸರಾ ಮೂಲಕ ಜಗತ್ತಿಗೆ ಸಾರುವ ಕೆಲಸವನ್ನು ನಾವು ಮಾಡುತ್ತೇವೆ. ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ನಾಡು ನಮ್ಮದು. ನಮ್ಮ ಜನ ಬಹಳ ಸುಸಂಸ್ಕೃತರು. ಪ್ರೀತಿ ಹಂಚುವವರು. ಎಲ್ಲಾ ಜಾತಿ ಧರ್ಮದವರನ್ನು ಅತ್ಯಂತ ಪ್ರೀತಿಯಿಂದ, ಘನತೆಯಿಂದ ನಡೆಸಿಕೊಳ್ಳುವುದು ನಮ್ಮ ಧರ್ಮ ಮತ್ತು ಕರ್ತವ್ಯ ಎಂದರು.
ಮೈಸೂರು ಅರಸರ ಕಾಲದಿಂದಲೂ ಅತ್ಯಂತ ವೈಭವದಿಂದ ಆಚರಿಸಲ್ಪಡುತ್ತಿರುವ ದಸರಾವನ್ನು ನಾನು ತಂದೆಯ ಹೆಗಲ ಮೇಲೆ ಕುಳಿತು ನೋಡುತ್ತಿದ್ದೆ. ರಾಜರ ಕಾಲ ಮುಗಿದು ಪ್ರಜಾರಾಜ್ಯ ಬಂದ ಬಳಿಕ ರಾಜ್ಯ ಸರ್ಕಾರ ನಾಡಹಬ್ಬವಾಗಿ ದಸರಾವನ್ನು ಆಚರಿಸುತ್ತಿದೆ. ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವುದೇ ಸಾಮಾಜಿಕ ನ್ಯಾಯ. ಇದು ನಮ್ಮ ಸಂವಿಧಾನದ ಮತ್ತು ನಮ್ಮ ಸರ್ಕಾರದ ಆಶಯ ಎಂದು ಹೇಳಿದರು.
ಜನರಗೆ ಸ್ಥಿರ ಆದಾಯವನ್ನು ಬರುವಂತೆ ಮಾಡಿ ಕೊಂಡುಕೊಳ್ಳುವ ಶಕ್ತಿ ಬರುವಂತೆ ಮಾಡಲು 5 ಗ್ಯಾರೆಂಟಿ ಗಳನ್ನು ಘೋಷಣೆ ಮಾಡಿ 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ. 5 ನೇಯ ಗ್ಯಾರೆಂಟಿ ಯನ್ನು ಮುಂದಿನ ಜನವರಿಯಲ್ಲಿ ಜಾರಿಗೆ ತರುತ್ತೇವೆ. ಮುಂಗಾರು ಮಳೆ ಕೊರತೆಯಿಂದ 42 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು 30 ಸಾವಿರ ಕೋಟಿ ರೂಪಾಯಿಗಳ ಬೆಳೆ ನಷ್ಟ ಆಗಿದೆ. ಮಾನದಂಡಗಳ ಪ್ರಕಾರ 4850 ಕೋಟಿ ಬೆಳೆ ಹಾನಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 116 ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮುಂದಿನ ಹಿಂಗಾರು ಮಳೆ ಉತ್ತಮವಾಗಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ 116 ತಾಲ್ಲೂಕುಗಳಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲದ ಸ್ಥಿತಿ ಇದೆ. ಮಳೆ ಇಲ್ಲದೆ ನಾಡಿನ ರೈತ ಕುಲ , ನಾಡಿನ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಅದ್ದೂರಿ ಇಲ್ಲದ ವೈಭವಕ್ಕೆ ಕೊರತೆ ಇಲ್ಲದ ಅರ್ಥಪೂರ್ಣ ದಸರಾ ಆಚರಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮೈಸೂರು ಮೇಯರ್ ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾಜ್೯, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ನಾಗರೀಕ ಫೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಟಿ.ಎಸ್.ಶ್ರೀವತ್ಸ,ವ ಸದಸ್ಯ ಮರಿತಿಬ್ಬೇಗೌಡ, ಉಪ ಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ದಸರಾ ವಿಶೇಷಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿ.ಪಂ. ಸಿಇಓ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.