ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.15 : ಮದ್ಯಪಾನ ಮತ್ತು ಮಾದಕ ವ್ಯಸನದ ಸಮಸ್ಯೆಯಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ನಾವೆಲ್ಲರೂ ಪ್ರಯತ್ನಿಸೋಣ. ಇದರಿಂದ ನಾವು ಆರೋಗ್ಯಕರ ಮತ್ತು ಸಂತೋಷದ ಸಮಾಜದತ್ತ ಸಾಗಬಹುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬ್ರಹ್ಮಕುಮಾರಿಸ್ ವತಿಯಿಂದ ಬ್ರಹ್ಮಕುಮಾರಿಗಳ ರಾಷ್ಟ್ರೀಯ ಯೋಜನೆಯ ರಾಜ್ಯ ಮಟ್ಟದ ‘ನಶಾ ಮುಕ್ತ ಭಾರತ ಅಭಿಯಾನ’ವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವ್ಯಸನಕ್ಕೆ ಒಳಗಾದವರು, ಮಾದಕ ದ್ರವ್ಯಗಳನ್ನು ಪಡೆಯಲು, ಅವರು ತಮ್ಮ ಮನೆಯಲ್ಲಿ, ಸ್ನೇಹಿತರಲ್ಲಿ ಮತ್ತು ನೆರೆಹೊರೆಯವರಲ್ಲಿ ಕಳ್ಳತನ ಮತ್ತು ಅಪರಾಧ ಚಟುವಟಿಕೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಇಂದು ಇಡೀ ಜಗತ್ತು ಈ ಸಮಸ್ಯೆಯನ್ನು ಒಂದಲ್ಲ ಒಂದು ರೂಪದಲ್ಲಿ ಎದುರಿಸುತ್ತಿದೆ. ಆಧುನಿಕ ಜೀವನಶೈಲಿ, ಒತ್ತಡ ಮತ್ತು ಇನ್ನಿತರ ಚಟಗಳು ಮನುಷ್ಯನನ್ನು ವ್ಯಸನದ ಕಡೆಗೆ ಕೊಂಡೊಯ್ದಿವೆ. ಹಾಗಾಗಿ, ಮದ್ಯಪಾನ, ಮಾದಕ ದ್ರವ್ಯಗಳನ್ನು ಸೇವಿಸದಂತೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕುಟುಂಬ ಸದಸ್ಯರು, ಮಾದಕ ದ್ರವ್ಯ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮದ್ಯಪಾನ ಮತ್ತು ಮಾದಕ ವ್ಯಸನ ತಡೆಗಟ್ಟುವಿಕೆಗಾಗಿ ಸಹಾಯ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಮಾದಕ ವ್ಯಸನಿಗಳ ಜಾಗೃತಿ, ಗುರುತಿಸುವಿಕೆ, ಚಿಕಿತ್ಸೆ ಮತ್ತು ಪುನರ್ವಸತಿ ಸೇರಿದಂತೆ ಸಮಗ್ರ ಸೇವೆಗಳನ್ನು ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರಗಳ ಮೂಲಕ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಬ್ರಹ್ಮ ಕುಮಾರೀಸ್ ರಾಜಯೋಗಿ ಡಾ.ಬಿ.ಕೆ. ಮೃತ್ಯುಂಜಯ್, ಬ್ರಹ್ಮ ಕುಮಾರೀಸ್ ಕರ್ನಾಟಕ ರಾಜಯೋಗಿನಿ ಬಿ. ಆಫ್. ಅಂಬಿಕಾ, ನೈಋತ್ಯ ರೈಲ್ವೆಯ ಎಡಿಆರ್ ಎಂ ಕುಸುಮಾ ಹರಿಪ್ರಸಾದ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.