ಸುದ್ದಿಮೂಲ ವಾರ್ತೆ
ಕುಷ್ಟಗಿ,ಅ.15:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಡಿಪೋಗೆ ಸೇರಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ತಾಲೂಕಿನ ಮಿಯ್ಯಾಪೂರ ಗ್ರಾಮದ ಬಳಿ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಬಸ್ ಚಾಲಕ ಹಾಗೂ ನಿರ್ವಾಹಕ ಸೇರಿ ಸುಮಾರು 35ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಕುಷ್ಟಗಿ ಹಾಗೂ ಹನುಮಸಾಗರ ಪೊಲೀಸ್ ಠಾಣಾ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಯಾರಿಗೂ ಜೀವಹಾನಿಯಾಗಿಲ್ಲ.
ಕೆಲ ಗಾಯಾಳುಗಳು ಕುಷ್ಟಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆಯ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಾಲೂಕಿನ ದೋಟಿಹಾಳದಿಂದ ದೋಟಿಹಾಳ, ಮೆಣಸಗೇರಿ, ಮಿಯಾಪೂರ, ಹನುಮಸಾಗರ, ಗಜೇಂದ್ರಗಡ, ಹುಬ್ಬಳ್ಳಿ ಮಾರ್ಗವಾಗಿ ಮಂಗಳೂರು ಕಡೆಗೆ ಹೊರಟಿದ್ದ ಬಸ್ ಇದಾಗಿದೆ.
ಮಿಯ್ಯಾಪೂರ ಗ್ರಾಮದ ಹಳ್ಳದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಸ್ ವಾಲಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉದ್ಯೋಗ ಅರಸಿ ಅಡವಿಭಾವಿ, ಕಡೇಕೊಪ್ಪ, ಮಿಯ್ಯಾಪೂರ, ದೋಟಿಹಾಳ ಇತರೆ ಗ್ರಾಮಗಳ ಭಾಗದ ಜನರು ಮಂಗಳೂರು, ಕೇರಳ, ಗೋವಾ ನಗರ ಪ್ರದೇಶಗಳ ಕಡೆಗೆ ಹೊರಟಿದ್ದರು ಎಂದು ಹೇಳಲಾಗುತ್ತದೆ.