ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.15: ದುಬೈ ಗೋಲ್ಡ್ ಫೆಸ್ಟಿವಲ್’ ಮಾದರಿಯಲ್ಲಿ ‘ಬೆಂಗಳೂರು ಗೋಲ್ಡ್ ಫೆಸ್ಟಿವಲ್”ಗೆ ಭಾನುವಾರ ಅದ್ಧೂರಿ ಚಾಲನೆ ದೊರೆಯಿತು. ಜಯನಗರ 4ನೇ ಬ್ಲಾಕ್ನಲ್ಲಿ ಗಣಪತಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವರಿಗೆ ಪೂಜೆ ಅರ್ಪಿಸುವ ಮೂಲಕ ವಿಧಾನ ಪರಿಷತ್ ಶಾಸಕರು ಹಾಗೂ ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ. ಟಿ.ಎ.ಶರವಣ, ದಿ ಜುವೆಲ್ಲರಿ ಅಸೋಸಿಯೇಷನ್ ಸಂಘದ ಅಧ್ಯಕ್ಷ ಸುರೇಶ್ ಗನ್ನ, ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ನ ಅಧ್ಯಕ್ಷ ಡಿ.ವಿ. ರಮೇಶ್ ರವರು ಚಾಲನೆ ನೀಡಿದರು. ವಿವಿಧ ಸಾಂಸ್ಕೃತಿಕ ಕಲಾ ಮೇಳಗಳು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದವು.
ಈ ವೇಳೆ ಮಾತನಾಡಿದ ಟಿ.ಎ.ಶರವಣ, ಬೆಂಗಳೂರು ಚಿನ್ನದ ಹಬ್ಬಕ್ಕೆ ಇದೀಗ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕರ್ನಾಟಕ ತುಂಬೆಲ್ಲ ಚಿನ್ನದ ಹಬ್ಬ ಆಚರಣೆ ಮಾಡಲಾಗುತ್ತಿದೆ. ಸುಮಾರು 200 ಟ್ರೇಡರ್ಸ್ಗಳು ಈ ಹಬ್ಬದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು ರಾಜ್ಯವ್ಯಾಪಿ 45 ದಿನಗಳ ಕಾಲ ಗೋಲ್ಡ್ ಫೆಸ್ಟಿವಲ್ ನಡೆಯಲಿದೆ. ಎಲ್ಲ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂಗಾರವನ್ನು ಕೊಳ್ಳುವಂತೆ ಮನವಿ ಮಾಡಿದರು.
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟೇ ಗಗನಕ್ಕೇರಿದರೂ ಗ್ರಾಹಕರಿಗೆ ನಷ್ಟವಾಗುವುದಿಲ್ಲ. ಬಂಗಾರದ ಮೇಲೆ ಬಂಡವಾಳ ಹಾಕಿದರೆ ಅದು ಆಪತ್ಕಾಲದಲ್ಲಿ ಆಸರೆಯಾಗಲಿದೆ. ಸಂಕಷ್ಟಕ್ಕೆ ಸಹಾಯವಾಗಲಿದೆ. ಬೇರೆ ಬೇರೆ ವಸ್ತುಗಳನ್ನು ಖರೀದಿ ಮಾಡುವುದರ ಜತೆಗೆ ಚಿನ್ನದ ಮೇಲೆ ಹೆಚ್ಚಿನ ಬಂಡಾಳ ಹೂಡಿಕೆ ಮಾಡಿ.ಆ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಗೋಲ್ಡ್ ಉತ್ಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಚಿನ್ನದ ಹಬ್ಬದ ಹಿನ್ನೆಲೆಯಲ್ಲಿ ಉಡುಗೊರೆಯನ್ನು ಕೂಡ ಘೋಷಣೆ ಮಾಡಲಾಗಿದೆ. 3ಕೆ.ಜಿ ಚಿನ್ನ 45 ಕೆ.ಜಿ.ಬೆಳ್ಳಿ ಮತ್ತು ಹ್ಯೂಡೆಯ್ ಕಾರ್ ಅನ್ನು ಗೆಲ್ಲುವ ಅವಕಾಶ ಗ್ರಾಾಹಕರಿನಿಗೆ ನೀಡಲಾಗಿದೆ. 3 ಸಾವಿರಕ್ಕೂ ಹೆಚ್ಚಿನ ಬಹುಮಾನಗಳನ್ನು ಗ್ರಾಹಕರು ಗೆಲ್ಲಬಹುದಾಗಿದೆ. ಡಿಸೆಂಬರ್ ಮೊದಲ ವಾರದಿಂದ ಡ್ರಾ ಮೂಲಕ ಬಹುಮಾನವನ್ನು ಘೋಷಣೆ ಮಾಡಲಾಗುವುದು. ಎಲ್ಲರೂ ಕೂಡ ಹೆಚ್ಚಿಿನ ಸಂಖ್ಯೆಯಲ್ಲಿ ಭಾಗವಹಿಸಿ ಬಂಗಾರದ ಹಬ್ಬದಲ್ಲಿ ಖುಷಿಯಿಂದ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ದಿ ಜ್ಯೂವೆಲರಿ ಅಸೋಸಿಯೇಷನ್ ಅಧ್ಯಕ್ಷ ಸುರೇಶ ಗನ್ನ ಮಾತನಾಡಿ, ಬೆಂಗಳೂರು ಗೋಲ್ಡ್
ಫೆಸ್ಟಿವಲ್ ಅನ್ನು ದುಬೈ ಗೋಲ್ಡ್ ಫೆಸ್ಟಿವಲ್ ಮಾದರಿಯಲ್ಲಿ ಆಚರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ದುಬೈ ಶಾಪಿಂಗ್ ಫೆಸ್ಟಿವಲ್ನಂತೆಯೇ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಸಿಸುವ ಗುರಿ ಹೊಂದಲಾಗಿದೆ. ನಗರದ ವೈವಿಧ್ಯತೆಯನ್ನು ಎತ್ತಿ ಹಿಡಿಯುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಚಿನ್ನ ಮಾರಾಟದ ಪ್ರಮುಖ ಕೇಂದ್ರವಾಗಿರುವ ಬೆಂಗಳೂರು ಒಳಗೊಂಡಂತೆ ರಾಜ್ಯದ 200 ಮಳಿಗೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದಡಿ 2 ನೇ ಬೆಂಗಳೂರು ಗೋಲ್ಡ್ ಫೆಸ್ಟಿವಲ್ ಆಚರಿಸುತ್ತಿದೆ. ಅ.15 ರಿಂದ ನ.30 ರ ವರೆಗೆ ಚಿನ್ನ ಖರೀದಿಸಿದರೆ ಕೂಪನ್ ಮೂಲಕ ಚಿನ್ನ, ಕೆ.ಜಿ.ಬೆಳ್ಳಿ ಗೆಲ್ಲುವ ಉಜ್ವಲ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಐದು ಸಾವಿರ ರೂಪಾಯಿಗೆ ಒಂದು ಕೂಪನ್ , ಲಕ್ಕಿ ಡ್ರಾ ಸಂಪೂರ್ಣವಾಗಿ ಡಿಜಿಟಲ್ ಮೂಲಕ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ನ ಅಧ್ಯಕ್ಷ ಡಿ.ವಿ. ರಮೇಶ್ ಬಿಡುಗಡೆ ಮಾಡಿದರು. ಹೆಸರಾಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಗೋಲ್ಡ್ ಫೆಸ್ಟಿವಲ್ನ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 45 ದಿನಗಳ ಕಾಲ ಎಲ್ಲಾ ಮಳಿಗೆಗಳಲ್ಲಿ ಮೆಗಾ ಚಿನ್ನ, ಬೆಳ್ಳಿ ಮಾರಾಟದ ಹಬ್ಬ ನಡೆಯಲಿದೆ. ಬೆಂಗಳೂರು ಮತ್ತು ತುಮಕೂರು, ಹಾಸನ ಮತ್ತು ಶಿವಮೊಗ್ಗದಂತಹ ಎರಡನೇ ಶ್ರೇಣಿಯ ನಗರಗಳಿಂದ ಹೆಚ್ಚು ಆಭರಣ ವ್ಯಾಪಾರಿಗಳು ಭಾಗವಹಿಸುತ್ತಿರುವುದು ಹಬ್ಬದ ವಿಶೇಷತೆಯಾಗಿದೆ. ‘ಚಿನ್ನದಲ್ಲಿ ಉಳಿಸಿ, ಚಿನ್ನವು ನಿಮ್ಮನ್ನು ಉಳಿಸುತ್ತದೆ‘ ಎಂಬ ಧ್ಯೇಯವಾಕ್ಯದಡಿ ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ವಜ್ರಗಳಂತಹ ಅಮೂಲ್ಯವಾದ ಲೋಹಗಳಲ್ಲಿ ಹೂಡಿಕೆ ಮಾಡುವ ಮಹತ್ವದ ಅರಿವು ಮೂಡಿಸಲಾಗುತ್ತಿದೆ ಎಂದರು.