ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.16: ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರಾಕ್ಷೇಪಣಾ ಪತ್ರ (ಎನ್.ಓ.ಸಿ) ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಸಿರು ಪ್ರವರ್ಗದ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಅನುಮತಿ ಕೋರಿ ಸಲ್ಲಿಸಲಾಗುವ ಅರ್ಜಿಗಳು ನಿಯಮಾನುಸಾರ ಇದ್ದಲ್ಲಿ 30 ದಿನಗಳ ಒಳಗೆ, ಕೇಸರಿ ಅಂದರೆ ಆರೆಂಜ್ ಪ್ರವರ್ಗದ ಅರ್ಜಿಗಳನ್ನು 45 ದಿನಗಳ ಒಳಗೆ ಮತ್ತು ಕೆಂಪು ಪ್ರವರ್ಗದ ನಿರಾಕ್ಷೇಪಣಾ ಪತ್ರ ಕೋರಿ ಸಲ್ಲಿಸುವ ಅರ್ಜಿಗಳನ್ನು 90 ದಿನಗಳ ಒಳಗೆ ಇತ್ಯರ್ಥ ಪಡಿಸಬೇಕು ಎಂದು ಆದೇಶ ನೀಡಿದರು.
ಮಂಡಳಿಯಲ್ಲಿ 1400ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಉಳಿದಿದ್ದು, ಈ ರೀತಿ ವಿಳಂಬ ಮಾಡುವುದು ಸರಿಯಲ್ಲ, ಹೀಗಾಗಿ ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿ ಆಗಬೇಕು, ಅನಗತ್ಯವಾಗಿ ವಿಳಂಬವಾದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಸಿರು ಪಟಾಕಿಗೆ ಉತ್ತೇಜನ:
ಪರಿಸರಕ್ಕೆ ಹಾನಿಕಾರಕವಾದ ಪಟಾಕಿಗಳ ತಯಾರಿಕೆ, ಸಾಗಾಟ, ದಾಸ್ತಾನು ಮತ್ತು ಮಾರಾಟವನ್ನು ನ್ಯಾಯಾಲಯವೇ ನಿಷೇಧಿಸಿದೆ. ಇದನ್ನು ಮಂಡಳಿ ಮತ್ತು ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದರು.
ನೆರೆ ರಾಜ್ಯಗಳಿಂದ ಪಟಾಕಿ ರಾಜ್ಯಕ್ಕೆ ಬರುತ್ತಿದೆ ಇದಕ್ಕೆ ಕಡಿವಾಣ ಹಾಕಲಾಗುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದ ಗಡಿಯಲ್ಲಿ ತಪಾಸಣೆ ನಡೆಯುತ್ತಿದೆ. ಹಸಿರು ಪಟಾಕಿಗಳ ಮೇಲೆ ಕ್ಯು.ಆರ್. ಕೋಡ್ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೆ ಹಸಿರು ಪಟಾಕಿ ತಿಳಿಯುತ್ತದೆ ಎಂದು ತಿಳಿಸಿದರು.
ಜನರಲ್ಲಿ ಜಾಗೃತಿ ಮೂಡಿಸಿದರೆ, ಪಟಾಕಿಗಳಿಂದ ಆಗುವ ಅಪಾಯದ ಬಗ್ಗೆ ತಿಳಿಯ ಹೇಳಿದರೆ ಹಸಿರು ಪಟಾಕಿ ಉತ್ತೇಜಿಸಲು ಮತ್ತು ಹೊಗೆ ಉಗುಳುವ, ಅಪಾಯಕಾರಿ ಅಂಶ ಒಳಗೊಂಡ ಪಟಾಕಿ ನಿರ್ಬಂಧಿಸಲು ಸಾಧ್ಯ. ಹೀಗಾಗಿ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಈ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುವಂತೆ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
58 ಸಮುಚ್ಚಯಗಳಿಗೆ ತಲಾ 3 ಕೋಟಿ ದಂಡ: ಬೆಂಗಳೂರು ನಗರದ ಬೆಳ್ಳಂದೂರು ಕೆರೆಯ ಸುತ್ತಮುತ್ತ ತ್ಯಾಜ್ಯ ನೀರನ್ನು ಕರೆಗೆ ನೇರವಾಗಿ ಹರಿಸುತ್ತಿರುವ ಬೃಹತ್ ವಸತಿ ಸಮುಚ್ಚಯಗಳಿಂದ ಸುಮಾರು 200 ಕೋಟಿ ರೂ. ದಂಡ ವಸೂಲಿ ಮಾಡಿ, ತ್ಯಾಜ್ಯ ಜಲ ಸಂಸ್ಕರಣೆಗೆ ಘಟಕ (ಎಸ್.ಟಿ.ಪಿ.) ನಿರ್ಮಿಸಲು ಎನ್.ಜಿ.ಟಿ. ಆದೇಶ ನೀಡಿದೆ. 2024ರ ಡಿಸೆಂಬರ್ ಒಳಗೆ ಈ ಎಸ್.ಟಿ.ಪಿ. ಕಾರ್ಯ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಸುಮಾರು 58 ಕಟ್ಟಡ ಸಮುಚ್ಚಯಗಳಿಗೆ ತಲಾ 3 ಕೋಟಿ ರೂ. ದಂಡ ವಿಧಿಸಲಾಗಿದೆ. ಆದರೆ ಈವರೆಗೆ 4 ಕೋಟಿ ರೂ. ಮಾತ್ರವೇ ಸಂಗ್ರಹವಾಗಿದೆ ಎಂದು ತಿಳಿಸಿದರು.
ಕಟ್ಟಡ ನಿರ್ಮಾಣ ಮಾಡಿದ ಬಿಲ್ಡರ್ ಗಳು ಮನೆಗಳನ್ನು ಮಾರಾಟ ಮಾಡಿ ಹೋಗಿದ್ದಾರೆ. ಆದರೆ ಈಗ ಮನೆ ಖರೀದಿಸಿರುವ ಮಧ್ಯಮವರ್ಗದ ಜನರಿಂದ ದಂಡ ವಸೂಲಿ ಮಾಡುವುದು ಕಷ್ಟವಾಗಿದೆ ಆದರೂ ಕಾನೂನಿನ ಮಿತಿಯಲ್ಲಿ ದಂಡ ವಸೂಲಿ ಮಾಡಿ ಕೆರೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದರು.
ಸಭೆಯಲ್ಲಿ ಮಂಡಳಿಯ ಅಧ್ಯಕ್ಷ ಶಾಂತ ತಿಮ್ಮಯ್ಯ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಜಾವೇದ್ ಅಖ್ತರ್ ಮತ್ತಿತರರು ಉಪಸ್ಥಿತರಿದ್ದರು.