ಸುದ್ದಿಮೂಲ ವಾರ್ತೆ
ಮೈಸೂರು,ಅ.16 :ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ ಯೋಜನೆಗಳು ಎಲ್ಲ ಜಾತಿ ಧರ್ಮದ ಜನರಿಗೂ ತಲುಪುತ್ತಿದ್ದು, ಅವಕಾಶ ವಂಚಿತರಿಗೆ ನ್ಯಾಯ ಒದಗಿಸುವ ಯೋಜನೆಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಸಂಜೆ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿದ್ದಸಿಂಹಾಸನದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವಿಭಾಗೀಯ ಮಠದಿಂದ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿಂದುಳಿದ, ದಲಿತರು, ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕು. ಶಕ್ತಿ ಯೋಜನೆಯಡಿ 70 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆಗೆ ಚುರುಕುಗೊಂಡು, ರಾಜ್ಯದ ಜಿಡಿಪಿ ಹೆಚ್ಚಾಗುತ್ತಿದೆ. ರಾಜ್ಯದ ತಲಾವಾರು ಆದಾಯ ಹೆಚ್ಚಾಗಿದೆ. ಪ್ರತಿ ಅರ್ಹ ಫಲಾನುಭವಿ ಕುಟುಂಬಕ್ಕೆ ವಾರ್ಷಿಕವಾಗಿ 50 ರಿಂದ 60 ಸಾವಿರ ಸರ್ಕಾರ ಒದಗಿಸುತ್ತಿದ್ದು, ಕುಟುಂಬದ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.
ಜನರ ಆಶೀರ್ವಾದದ ಫಲದಿಂದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಇತರೆ ರಾಜಕೀಯ ಪಕ್ಷಗಳು ರಾಜಕೀಯ ಪ್ರೇರಿತವಾಗಿ ಟೀಕೆ ಮಾಡುತ್ತದೆ. ವಿರೋಧಪಕ್ಷಗಳು ಮಾಡುವುದು ಕೇವಲ ಆರೋಪಗಳೇ ಹೊರತು, ಸತ್ಯವಲ್ಲ ಎಂದರು.
ನಾನು ರಾಜಕೀಯಕ್ಕೆ ಬಂದು 50 ವರ್ಷಗಳಾಗಿದೆ. 2005 ರಲ್ಲಿಜೆಡಿಎಸ್ ನಿಂದ ನನ್ನನ್ನು ಉಚ್ಛಾಟನೆ ಮಾಡಿದ ನಂತರ ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಗಿ ಬಂತು. ಅಹ್ಮದ್ ಪಟೇಲ್ ಸೇರಿದಂತೆ ಅಂದಿನ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಸೇರಲು ಹೇಳಿದರು. ಜನರ ಆಶೀರ್ವಾದದಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ ಎಂದರು. ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಎಚ್.ವಿಶ್ವನಾಥ್, ಶಾಸಕರಾದ ರವಿಶಂಕರ್, ಹರೀಶ್ಗೌಡ, ಜಿಪಂ ಮಾಜಿ ಸದಸ್ಯ ಬಿ.ಎಂ. ರಾಮು ಇತರರು ಇದ್ದರು.