ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.16: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಐಟಿ ದಾಳಿ, ನಿಗಮ ಮಂಡಳಿಗಳಿಗೆ ನೇಮಕ ಮತ್ತು ಮುನಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಮಧಾನಪಡಿಸುವಂತಹ
ಮುನಿಸಿಕೊಂಡಿರುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸೋಮವಾರ ಮಹತ್ವದ ಮಾತುಕತೆ ನಡೆಯಿತು.
ದಿಢೀರ್ ಬೆಂಗಳೂರಿಗೆ ದೌಡಾಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸೋಮವಾರ ಬೆಳಗ್ಗೆಯೇ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ್ದರು. ಅತ್ತ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಮೈಸೂರು ದಸರಾ ಕಾರ್ಯಕ್ರಮ ಉದ್ಘಾಟನೆ ಬಳಿಕ ತರಾತುರಿಯಲ್ಲಿ ಬೆಂಗಳೂರಿಗೆ ಆಗಮಿಸಿ ಖರ್ಗೆ ಮನೆ ತಲುಪಿಸಿದ್ದರು. ಈಗಾಗಲೇ ಬೆಂಗಳೂರಿನಲ್ಲಿಯೇ ಇರುವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರಮುಖ ನಾಯಕರು ಕೆಲವು ತಾಸುಗಳ ಕಾಲ ಚರ್ಚಿಸಿದ್ದಾರೆ.
ಕಳೆದ 10 ದಿನಗಳಿಂದ ರಾಜ್ಯದಲ್ಲಿ ಐಟಿ ದಾಳಿಗಳು ನಡೆಯುತ್ತಿದ್ದು, ವಿವಿಧ ಮುಖಂಡರು, ಗುತ್ತಿಗೆದಾರರು, ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದು ಸುಮಾರು 90 ಕೋಟಿಗೂ ಅಧಿಕ ನಗದು ವಶಪಡಿಸಿಕೊಂಡಿದ್ದಾರೆ. ಕೆಲವು ದಾಳಿ ವೇಳೆ ಆ ಹಣ ಕಾಂಗ್ರೆಸ್ ನಾಯಕರುಗಳಿಗೆ ಸೇರಿದ್ದು ಎಂಬ ಆರೋಪಗಳು ಕೇಳಿಬಂದಿದ್ದವು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಸಿಎಂ ಮತ್ತು ಡಿಸಿಎಂ ಜೊತೆಗಾರರಿಗೆ ಸೇರಿದ್ದು ಎಂಬ ನೇರ ಆರೋಪ ಮಾಡಿದ್ದರು. ಬಿಜೆಪಿ ಸಹ ಈ ಸಂಬಂಧ ಜಿಲ್ಲಾವಾರು ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಉಂಟಾಗಿರುವ ಮುಜುಗರವನ್ನು ತಪ್ಪಿಸುವ ಉದ್ದೇಶದಿಂದ ನಾಯಕರು ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ನಿಗಮ ಮಂಡಳಿಗಳಿಗೆ ನೇಮಕ:
ನಿಗಮ ಮಂಡಳಿಗಳಿಗೆ ನೇಮಕ ಸಂಬಂಧ ಒಳಗಾಗಿ ಸಿಹಿ ಸುದ್ದಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಪ್ರಕಟಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಈ ಬಗ್ಗೆ ಪಕ್ಷದ ಶಾಸಕರು ಮತ್ತು ಮುಖಂಡರ ಮಧ್ಯೆ ಉಂಟಾಗಿರುವ ಗೊಂದಲಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸುಮಾರು 30 ನಿಗಮ ಮಂಡಳಿಗಳಿಗೆ ಮೊದಲ ಹಂತದಲ್ಲಿ ಅಧ್ಯಕ್ಷರ ನೇಮಕ ಮಾಡಬೇಕು. ಅದರಲ್ಲಿ ಶೇ.50ರಷ್ಟು ಶಾಸಕರಿಗೆ ಮತ್ತು ಶೇ.50ರಷ್ಟು ಪಕ್ಷದ ಮುಖಂಡರಿಗೆ ನೀಡುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.
ಜಾರಕಿಹೊಳಿ ಮುನಿಸು ತಣ್ಣಗೆ?
ಈ ಮಧ್ಯೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಕೋಪಗೊಂಡಿದ್ದರು. ಅದನ್ನು ದೆಹಲಿ ನಾಯಕರಿಗೂ ತಲುಪಿಸಿದ್ದರು. ಕೆ.ಸಿ. ವೇಣುಗೋಪಾಲ್ ದಿಢೀರ್ ಭೇಟಿಗೆ ಇದೂ ಒಂದು ಸಹ ಕಾರಣ ಎಂದು ಹೇಳಲಾಗುತ್ತಿದೆ.
ಬೆಳಗಾವಿ ರಾಜಕಾರಣದಲ್ಲಿ ಇತ್ತೀಚೆಗೆ ನಡೆದ ಕೆಲವು ವಿದ್ಯಮಾನಗಳ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಅಸಮಾಧಾನಗೊಂಡಿದ್ದರು. ಅಲ್ಲದೆ, ಅವರು ಇದನ್ನು ‘ದೊಡ್ಡವರ’ ಗಮನಕ್ಕೆ ತರಲು ಸೋಮವಾರ ಉತ್ತರ ಕರ್ನಾಟಕ ಭಾಗದ 20ಕ್ಕೂ ಹೆಚ್ಚು ಶಾಸಕರನ್ನು ಕರೆದುಕೊಂಡು ಪ್ರವಾಸ ತೆರಳಲು ಸಿದ್ಧವಾಗಿದ್ದರು ಎಂದು ಹೇಳಲಾಗುತ್ತಿದೆ. ಖರ್ಗೆ ನಿವಾಸದಲ್ಲಿ ನಡೆದ ಸಭೆ ಸತೀಶ್ ಜಾರಕಿಹೊಳಿ ಅವರ ಮುನಿಸನ್ನು ತಣ್ಣಗೆ ಮಾಡಿದೆ.
ಕೆಪಿಸಿಸಿ ಸಂಘಟನೆಯ ವಿಚಾರದಲ್ಲಿ ಇತ್ತೀಚೆಗೆ ನಡೆದ ಕೆಲವು ನೇಮಕಗಳಲ್ಲಿ ಜಾರಕಿಹೊಳಿ ಅವರು ಸೂಚಿಸಿದ ಹೆಸರುಗಳನ್ನು ಪರಿಗಣಿಸಿಲ್ಲ, ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ ಶಾಸಕರಿಗೆ ಯಾವುದೇ ಬೆಲೆ ಸಿಗುತ್ತಿಲ್ಲ, ಸರ್ಕಾರದ ಮಟ್ಟದಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ ಎಂಬುದು ಜಾರಕಿಹೊಳಿ ಮುನಿಸಿಗೆ ಕಾರಣವಾಗಿತ್ತು. ಅಲ್ಲದೆ, ಇದನ್ನು ಬಹಿರಂಗವಾಗಿ ವ್ಯಕ್ತಪಡಿಸಲು 20ಕ್ಕೂ ಹೆಚ್ಚು ಶಾಸಕರೊಂದಿಗೆ ಪ್ರವಾಸಕ್ಕೆ ತೆರಳಲು ಸಿದ್ಧವಾಗಿದ್ದರು. ಅವರನ್ನು ಬೆಂಬಲಿಸಿ ಕೆಲ ಶಾಸಕರು ಲಗೇಜ್ ಸಮೇತ ಜಾರಕಿಹೊಳಿ ನಿವಾಸಕ್ಕೆ ಬಂದು ತಲುಪಿದ್ದರು ಎನ್ನಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಇದನ್ನು ದೊಡ್ಡ ಮಟ್ಟಕ್ಕೆ ಕೊಂಡಿಯ್ಯಬಾರದು ಎಂದು ಕೆ.ಸಿ. ವೇಣುಗೋಪಾಲ್ ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿಗೆ ಬಂದು ಜಾರಕಿಹೊಳಿ ಅಸಾಮಾಧನವನ್ನು ತಣಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸೂಕ್ತ ಸಂದೇಶ ರವಾನೆಯಾದ ಬಳಿಕ ಜಾರಕಿಹೋಳಿ ಶಾಸಕರ ತಂಡದೊಂದಿಗೆ ಮೈಸೂರಿನತ್ತ ಹೊರಡಬೇಕಿದ್ದ ಪ್ರವಾಸವನ್ನು ರದ್ದು ಮಾಡಿದ್ದಾರೆ.