ಸುದ್ದಿಮೂಲ ವಾರ್ತೆ
ಕುಷ್ಟಗಿ, ಅ. 16:12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ ನಮ್ಮ ಜೀವನದ ಬೆಳಕು. ಎಲ್ಲಾ ಕಾಲಘಟ್ಟಕ್ಕೂ ಅನ್ವಯವಾಗುತ್ತದೆ ಎಂದು ಹುನಗುಂದ ತಾಲೂಕಿನ ಕನ್ನಡ ಪ್ರಾಧ್ಯಾಪಕ ಡಾ.ಮುರ್ತುಜಾ ಒಂಟಿ ಅವರು ಹೇಳಿದರು.
ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ ಬಸವ ಸಮಿತಿ ವತಿಯಿಂದ 122ನೇ ವಚನ ಚಿಂತನ ಪಾಕ್ಷಿಕ ಕಾರ್ಯಕ್ರಮದಲ್ಲಿ ‘ಬಸವಾದಿ ಶರಣರ ಸಂದೇಶಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮಂಡಿಸಿ ಮಾತನಾಡಿ,12ನೇ ಶತಮಾನದ ಮುಂಚೆ ರಚಿತಗೊಂಡ ಸಾಹಿತ್ಯ ಜನಪರವಾಗಿರಲಿಲ್ಲ. ಪಂಪ, ರನ್ನ, ಜನ್ನ ಮೊದಲದ ಸಾಹಿತಿಗಳು ಸಾಹಿತ್ಯ ತಮ್ಮ ಪಾಂಡಿತ್ಯ ಪ್ರದರ್ಶಿಸಲು ಹಾಗೂ ರಾಜ ಮಹಾರಾಜರಿಂದ ಮೆಚ್ಚುಗೆ ಅಥವಾ ಮತ್ತೇನಾದರೂ ಪಡೆಯಲು ರಚಿಸಿದರು. ಆದರೆ, ಬಸವಾದಿಶರಣರು ಜನಸಾಮಾನ್ಯರ ಬದುಕಿನ ಪ್ರಗತಿಗಾಗಿ ವಚನ ಸಾಹಿತ್ಯ ರಚಿಸಲು ಮುಂದಾದವರು ಎಂಬುದನ್ನು ನಾವು ಪ್ರಾಂಜಲ ಮನಸ್ಸಿನಿಂದ ಹೇಳಬೇಕು ಎಂದರು.
ಸಮಾಜ ಸುಧಾರಣೆ ತರಲು, ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿಸಲು, ಪ್ರಾಪಂಚಿಕ ಸುಖದಿಂದ ಪರಮಾರ್ತ್ಯ ಸುಖದಲ್ಲಿ ಕೊಂಡೊಯ್ಯವಂತಹ ಸದುದ್ದೇಶಗಳನ್ನು ಇಟ್ಟುಕೊಂಡು ಬಸವಾದಿ ಶರಣರು ವಚನಗಳನ್ನು ರಚಿಸಲು ಮುಂದಾದರು. ಹೀಗಾಗಿ ವಚನ ಸಾಹಿತ್ಯವು ವೇದ – ಉಪಷನ್ನಿತ್ತು, ಯಾವುದೇ ಧರ್ಮ ಗ್ರಂಥಗಳಿಗಿಂತ ಕಡಿಮೆ ಇಲ್ಲ ಎಂಬುದು ನಾವು ಅರಿಯಬೇಕು ಎಂದ ಡಾ.ಮುರ್ತುಜಾ ಒಂಟಿ ಅವರು, ವಚನ ಸಾಹಿತ್ಯದಲ್ಲಿ ಅರಿವಿದೆ ,ಆಚಾರ, ಅನುಭಾವವಿದೆ. ಕರ್ಮಸಿದ್ದಾಂತದ ಬದಲು ಕಾಯಕ ಸಿದ್ದಾಂತವಿದೆ ಎಂದರು.
ಇಂದು ಜಗತ್ತು ಕೆಟ್ಟ ಸಮಸ್ಯೆಗಳಿಗೆ ಮಾರುಹೋಗಿ ಹಣ, ಅಧಿಕಾರದ ಬೆನ್ನುಹತ್ತಿದೆ. ಇಂತಹ ಸಂದರ್ಭದಲ್ಲಿ ಅಂತರಂಗದ ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸಿ ವ್ಯಕ್ತಿಯನ್ನು ಮಾನವನಾಗಿ ಮಾಡುವಂತಹ ವಚನ ಚಿಂತನ ಕಾರ್ಯಕ್ರಮ ಎಲ್ಲಡೆ ನಡೆಯಬೇಕು. ಜಾತಿ, ಧರ್ಮ ಬೇಧವಿಲ್ಲದೆ ಪ್ರತಿಯೊಬ್ಬ ರು ಭಾಗವಹಿಸಬೇಕು ಎಂದು ಕನ್ನಡ ಪ್ರಾಧ್ಯಾಪಕ ಡಾ.ಮುರ್ತುಜಾ ಒಂಟಿ ಅವರು ಮನವಿ ಮಾಡಿದರು.
ಈ ವೇಳೆ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಬಸವ ಸಮಿತಿ ತಾಲೂಕಾಧ್ಯಕ್ಷ ಶಿವಸಂಗಪ್ಪ ಬಿಜಿಕಲ್, ಜಾಗತಿಕ ಲಿಂಗಾಯತ ಮಹಾ ಸಭಾದ ತಾಲೂಕಾಧ್ಯಕ್ಷ ಟಿ ಬಸವರಾಜ, ಊರಿನ ಪ್ರಮುಖರಾದ ಸಿ.ಎಂ. ಹಿರೇಮಠ, ಮಹಾದೇವಪ್ಪ ಮಹಾಲಿಂಗಪುರ, ಸಂಗಪ್ಪ ಎಲಿಗಾರ, ಮಲ್ಲಪ ಬಾಳಿ, ರಾಮನಗೌಡ ಪಾಟೀಲ್, ಮಹಾತಯ್ಯ ಹಿರೇಮಠ, ಮಲ್ಲಪ್ಪ ಹೊರಪ್ಯಾಟಿ, ಸಿದ್ರಾಮಪ್ಪ ವಂದಾಲಿ,ಹಂಪಣ್ಣ ಗುಡದೂರ, ಡಾ.ಪ್ರಭು ಸುಂಕದ, ಅನ್ನಪೂರ್ಣ ಬಿರಾದಾರ ಇತರರು ಉಪಸ್ಥಿತರಿದ್ದರು. ಕಲಾವಿದ ಮಲ್ಲನಗೌಡ ಅಗಸಿಮುದಿನ ವಚನ ಪ್ರಾರ್ಥನೆ ಪ್ರಸ್ತುತ ಪಡಿಸಿದರು. ಬಸವ ಸಮಿತಿಯ ಕಾರ್ಯದರ್ಶಿ ಮಹೇಶ ಹಡಪದ ನಿರೂಪಿಸಿದರು.