ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.17: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇದೀಗ ಉಪಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದ್ದು ಆ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಂಪುಟದಲ್ಲಿ ಪ್ರಬಲ ಖಾತೆ ಸಚಿವರಾಗಿದ್ದರೂ ತೃಪ್ತರಾಗದ ಸತೀಶ್ ಜಾರಕಿಹೊಳಿ ಈಗ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು,ಇದೇ ಕಾರಣಕ್ಕಾಗಿ ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ತಮ್ಮ ಬೆಂಬಲಕ್ಕೆ ಇಪ್ಪತ್ತೈದು ಮಂದಿ ಶಾಸಕರಿದ್ದಾರೆ ಎಂಬುದನ್ನು ತೋರಿಸುವ ಸಲುವಾಗಿ ಮೈಸೂರು ದಸರಾ ಮಹೋತ್ಸವಕ್ಕೆ ಈ ಶಾಸಕರನ್ನು ಕರೆದುಕೊಂಡು ಹೋಗಲು ಸತೀಶ್ ಜಾರಕಿಹೊಳಿ ನಿರ್ಧರಿಸಿದ್ದರು.
ಸತೀಶ್ ಜಾರಕಿಹೊಳಿ ಅವರ ಈ ತಂತ್ರದ ವಿವರ ಸಿಗುತ್ತಲೇ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ಸೋಮವಾರ ರಾಜ್ಯಕ್ಕೆ ಕಳಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಮೂಲಕ ಸತೀಶ್ ಜಾರಕಿಹೊಳಿ ಅವರಿಗೆ ಬ್ರೇಕ್ ಹಾಕಿಸಿದ್ದರು.
ಆದರೆ, ಪಟ್ಟುಬಿಡದ ಸತೀಶ್ ಜಾರಕಿಹೊಳಿ ಇದೀಗ ತಮಗೆ ಉಪಮುಖ್ಯಮಂತ್ರಿ ಹುದ್ದೆ ಬೇಕು ಎಂಬ ಸಂದೇಶವನ್ನು ವೇಣುಗೋಪಾಲ್ ಅವರ ಮೂಲಕ ಹೈಕಮಾಂಡ್ಗೆ ರವಾನಿಸಿದ್ದು, ಇದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪೈಪೋಟಿ ನೀಡುವ ತಯಾರಿ ಎಂಬುದು ಸ್ಪಷ್ಟವಾಗಿದೆ.
ಅಂದ ಹಾಗೆ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜತೆ ನಾಲ್ಕು ಉಪಮುಖ್ಯಮಂತ್ರಿ ಹುದ್ದೆಗಳನ್ನು ರಚಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು. ಅದರ ಪ್ರಕಾರ, ಒಕ್ಕಲಿಗ, ಲಿಂಗಾಯತ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಉಪಮುಖ್ಯಮಂತ್ರಿಗಳಾಗಬೇಕು ಎಂದು ಹೈಕಮಾಂಡ್ ಬಯಸಿತ್ತು.
ಆದರೆ ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದ ಡಿ.ಕೆ.ಶಿವಕುಮಾರ್ ಅಂತಿಮವಾಗಿ ತಾವು ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಬೇಕು ಎಂದರೆ ತಮ್ಮೊಬ್ಬರನ್ನೇ ನೇಮಕ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಕಾಲಕ್ಕೆ ನಾಲ್ಕು ಮಂದಿ ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಪ್ರಸ್ತಾಪವನ್ನು ಕೈಬಿಟ್ಟು ಹೈಕಮಾಂಡ್ ವರಿಷ್ಟರು ಡಿಕೆಶಿ ಅವರೊಬ್ಬರನ್ನೇ ಡಿಸಿಎಂ ಹುದ್ದೆಗೆ ನೇಮಕ ಮಾಡಿದ್ದರು.
ಆದರೆ ಇದೀಗ ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದು, ಇದರ ಹಿಂದೆ ಅವರ ಸಹೋದರರಾದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಒತ್ತಾಸೆ ಇದೆ ಎಂಬುದು ಉನ್ನತ ಮೂಲಗಳ ಹೇಳಿಕೆ.
ಅಂದ ಹಾಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಲೈಂಗಿಕ ಹಗರಣದ ಆರೋಪ ಹೊತ್ತು ರಾಜೀನಾಮೆ ನೀಡಿದ್ದರು. ಹೀಗೆ ತಾವು ರಾಜೀನಾಮೆ ನೀಡಲು ಕಾರಣವಾದ ಸಿ.ಡಿ ಯ ಹಿಂದೆ ಅಂದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇದೆ ಎಂದು ರಮೇಶ್ ಜಾರಕಿಹೊಳಿ ಅವರು ಆರೋಪಿಸಿದ್ದರು.
ಇದೀಗ ರಮೇಶ್ ಜಾರಕಿಹೊಳಿ ಅವರು ತಮ್ಮ ಮತ್ತೊಬ್ಬ ಸಹೋದರ ಬಿ.ಜೆ.ಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜತೆ ಸೇರಿ ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಮೇಲೆ ಒತ್ತಡ ಹೇರುತ್ತಿದ್ದು, ನೀವು ಶತಾಯ ಗತಾಯ ಡಿಸಿಎಂ ಆಗಲೇಬೇಕು ಎಂದು ಒತ್ತಡ ಹೇರಿದ್ದಾರೆನ್ನಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಚಿವ ಸಂಪುಟದಲ್ಲಿ ನೀವು ಡಿಕೆಶಿಗೆ ಸರಿಸಮನಾದ ಸ್ಥಾನದಲ್ಲಿರಬೇಕು. ಅದಕ್ಕೆ ಅಗತ್ಯವಾದ ಬಲವೂ ನಿಮ್ಮ ಜತೆಗಿದೆ. ಇದನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲು ಮುನ್ನುಗ್ಗಿ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಕೆಶಿ ಮೇಲಿನ ಸಿಟ್ಟನ್ನು ಈ ರೀತಿ ತೀರಿಸಿಕೊಳ್ಳಲು ಹೊರಟ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಇದಕ್ಕಾಗಿ ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಶಸ್ತ್ರವನ್ನಾಗಿ ತಯಾರು ಮಾಡುತ್ತಿದ್ದು ಈ ಬೆಳವಣಿಗೆ ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಗಿದೆ.