ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 17 : ಕನ್ನಡ ನಾಡಿನಲ್ಲಿ ಕನ್ನಡವನ್ನು ತಳಮಟ್ಟದಲ್ಲಿ ಉಳಿಸಿ ಬೆಳೆಸುವಲ್ಲಿ ಕಾರ್ಮಿಕರ ಪಾತ್ರ ಬಹುದೊಡ್ಡದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅಭಿಪ್ರಾಯಪಟ್ಟರು.
ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದವರು ಹಮ್ಮಿಕೊಂಡ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಕಾರ್ಮಿಕರ ಹಿತವನ್ನು ಕಾಯುವ ಹಿನ್ನೆಲೆಯಲ್ಲಿ ಪರಿಷತ್ತು ಕೆಲಸ ಮಾಡಲಿದೆ. ಸರಕಾರದಿಂದ ಕಾರ್ಮಿಕ ವರ್ಗದವರಿಗೆ ಸಿಗಬೇಕಾದ ಸವಲತ್ತುಗಳಿಗಾಗಿ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಒಕ್ಕೂಟದ ಅಧ್ಯಕ್ಷ ಎಮ್. ತಿಮ್ಮಯ್ಯ ಮಾತನಾಡಿ, ಹಿಂದೆ.ಮಹೇಶ ಜೋಶಿ ಅವರು ಕಾರ್ಮಿಕ ಆಯುಕ್ತರಾಗಿದ್ದಾಗ ಕನ್ನಡ ಕಾರ್ಮಿಕರ ಬಗ್ಗೆ ಮಾಡಿದ ಕೆಲಸಗಳು, ಕನ್ನಡದಲ್ಲಿಯೇ ನೀಡಿದ ಕೆಲವು ಮಹತ್ವದ ತೀರ್ಪುಗಳು ಇಂದಿಗೂ ಸಮಸ್ತ ಕಾರ್ಮಿಕ ವರ್ಗ ನೆನೆಯುತ್ತಿರುವುದು. ಅಂತಹ ಬಹುಮುಖಿ ವ್ಯಕ್ತಿತ್ವ ಹಾಗೂ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರುವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿಕ್ಕಿರುವುದು ಕನ್ನಡಿಗರ ಭಾಗ್ಯ ಹೇಳಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ಸಿದ್ದಲಿಂಗಯ್ಯ, ನಾಡಿನಲ್ಲಿ ಬರದ ಕರಿನೆರಳು ಇರುವ ಕಾಲದಲ್ಲಿ ಮಂಡ್ಯದಲ್ಲಿ ನಿಯೋಜಿತ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡುವ ಮೂಲಕ ಸಮಸ್ತ ಕನ್ನಡಿಗರ ಸ್ಥಿತಿಗತಿಗಳನ್ನು ಅರಿತ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆ ಎಂದರು.