ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ಅ.17:ಕಳೆದ ಒಂದು ವಾರದ ಹಿಂದೆ ಸುರಿದ ಮಳೆಯಿಂದಾಗಿ ಚರಂಡಿ ನೀರು ವರ್ತೂರು ಕೆರೆಗೆ ಸೇರಿ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡು ಸಾವಿರಾರು ಮೀನುಗಳು ಸಾವನ್ನಪ್ಪಿವೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
ಕೆರೆ ನೀರು ಕಲುಷಿತಗೊಂಡು ಮೃತಪಟ್ಟ ಮೀನುಗಳು ಕೆರೆಯ ಅಂಚಿನಲ್ಲಿ ತೇಲಾಡುತ್ತಿದ್ದು
ಪರಿಸರಕ್ಕೆ ಮಾರಕ ವಾಗಬಾರದೆಂದು ಬಿಡಿಎ ಅಧಿಕಾರಿಗಳು ಸತ್ತ ಮೀನುಗಳನ್ನು ಮುಚ್ಚುತ್ತಿದ್ದಾರೆ. ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಕೊಳಚೆ ನೀರು ವರ್ತೂರು ಕೆರೆಗೆ ಸೇರ್ಪಡೆಯಾದ ಪರಿಣಾಮ ನೀರು ಕಲುಷಿತಗೊಂಡು ಮೀನುಗಳ ಮೃತಪಟ್ಟಿವೆ ಸ್ಥಳೀಯರು ದೂರಿದರು.
ಕೆರೆಯ ನೀರೆಲ್ಲ ಕಪ್ಪು ಬಣ್ಣಕ್ಕೆ ತಿರುಗಿದೆ. ರಾಸಾಯನಿಕಗಳ ಮಿಶ್ರಣ ಹಾಗೂ ಆಮ್ಲಜನಕ ಕೊರತೆಯಿಂದಾಗಿ ಮೀನುಗಳು ಸಾವನ್ನಪ್ಪಿರಬಹುದು ಎನ್ನಲಾಗಿದೆ.
ಬಿಡಿಎ ಮತ್ತು ಬಿಬಿಎಂಪಿ ನಿರ್ವಹಣೆಯಲ್ಲಿರುವ ಈ ಕೆರೆಯ ಬಗ್ಗೆ ನಿರ್ಲಕ್ಷ್ಯ ಧೋರಣೆಯಿಂದ ಮೀನುಗಳ ಸಾವನ್ನಪ್ಪಿವೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಪರಿಸರ ಪ್ರೇಮಿಗಳು ಆಗ್ರಹಿಸಿದರು.
ಇಂತಹ ಪ್ರಕರಣ ಮರುಕಳಿಸುತ್ತಿದ್ದರೂ ಬಿಡಿಎ ಅಧಿಕಾರಿಗಳಾಗಲಿ, ಪಾಲಿಕೆ ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆರೆ ಅಭಿವೃದ್ದಿಗಾಗಿ ಕೋಟಿ ಕೋಟಿ ಹಣ ಮೀಸಲಿಡಲಾಗಿದೆ. ಆದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಕೆರೆ ನಿರ್ವಹಣೆ ಸಮರ್ಪಕವಾಗಿಲ್ಲ. ಕೆರೆಗೆ ಸಿಸಿ ಕ್ಯಾಮರಾಗಳು ಅಳವಡಿಸಿಲ್ಲ ಎಂದು ವರ್ತೂರು ನಿವಾಸಿ ಮುನಿರಾಜ್ ದೂರಿದರು.
ಕೆಲದಿನಗಳ ಹಿಂದೆ ಸುರಿದ ಮಳೆಯಿಂದಾಗಿ ತ್ಯಾಜ್ಯ ನೀರು ಕೆರೆಗೆ ಸೇರಿದೆ. ಕೆರೆ ಶುದ್ದೀಕರಣ ಘಟಕ ಇಲ್ಲದೇ ಇರುವುದು ಮುಖ್ಯ ಕಾರಣವಾಗಿದೆ. ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಾಸಗಿಯವರು ಜೆಸಿಬಿ ಮೂಲಕ ಕೆಲಸ ಮಾಡುವ ವೇಳೆ ಚರಂಡಿ ಒಡೆದು ಕಲುಷಿತ ನೀರು ಕೆರೆ ಸೇರಿದೆ. ಈ ಬಗ್ಗೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಸ್ಥಳೀಯ ವರ್ತೂರು ದೀಪಕ್ ಆಕ್ರೋಶ ವ್ಯಕ್ತಪಡಿಸಿದರು