ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.18:ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಧಗಧಗೆನೇ ಹೊತ್ತಿ ಉರಿದ ಘಟನೆ ಕೋರಮಂಗಲದಲ್ಲಿ ನಡೆದಿದೆ. ಅಗ್ನಿ ಅವಘಡದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ನಾಲ್ಕನೇ ಮಹಡಿ ಮೇಲಿಂದ ಜಿಗಿದಿದ್ದಾನೆ.
ಕೋರಮಂಗಲದ ನೆಕ್ಸಾ ಶೋ ರೂಂ ಕಟ್ಟಡದ ಮೇಲಿರುವ ಮಡ್ ಪೈಪ್ ಕೆಫೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸಿಬ್ಬಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಅಡುಗೆ ಕೋಣೆಯಲ್ಲಿ ಸಿಲಿಂಡ್ ಸ್ಫೋಟವಾಗಿ ಬಳಿಕ ಕೆಫೆಯಲ್ಲಿದ್ದ ಕುಷನ್ ಫರ್ನಿಚರ್ಗೂ ಬೆಂಕಿ ಆವರಿಸಿದೆ.
ನೋಡನೋಡುತ್ತಿದ್ದಂತೆ ಇಡೀ ನಾಲ್ಕನೇ ಮಹಡಿಯಲ್ಲಿದ್ದ ಕೆಫೆ ಸುಟ್ಟು ಕರಕಲಾಗಿದೆ. ಇತ್ತ ಕೆಫೆಯಲ್ಲಿದ್ದ ಸಿಬ್ಬಂದಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಒಮ್ಮೆಲೆ ಜಿಗಿದಿದ್ದಾನೆ.
ಮಹಡಿಯಿಂದ ಜಿಗಿದ ವ್ಯಕ್ತಿಯನ್ನು ನೇಪಾಳ ಮೂಲದ ಪ್ರೇಮ್ ಸಿಂಗ್ (28) ಎಂದು ತಿಳಿದು ಬಂದಿದೆ. ಕೆಫೆಯಲ್ಲಿ ಪ್ರೇಮ್ ಶೆಫ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಸಿಲಿಂಡರ್ ಸ್ಫೋಟದಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದಿಂದ ಜಿಗಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ತಿಲಕ್ ನಗರದ ಕೆ.ಜಿ. ಆಸ್ಪತ್ರೆಗೆ ಪ್ರೇಮ್ನನ್ನು ದಾಖಲು ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ.