ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ, ಅ. 18 : ಪೋಲೀಸರ ಕಣ್ಣು ತಪ್ಪಿಸಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಅಂತರರಾಜ್ಯ ಮರಳು ದಂಧೆಕೋರರ ಜಾಡು ಹಿಡಿದ ಬಾಗೇಪಲ್ಲಿ ಪೋಲಿಸರು, ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದು ಟಿಪ್ಪರ್ ಲಾರಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೋಲಿಸರ ಕಾರ್ಯಚರಣೆಯಿಂದ ತಾಲೂಕಿನಲ್ಲಿ ನಡೆಯುತ್ತಿರುವ ಮರಳು ದಂಧೆಗೆ ಬ್ರೇಕ್ ಬಿದ್ದಿದೆ. ಅದರೇ ಇತ್ತೀಚಿನ ಹಲವು ದಿನಗಳಿಂದ ಆಂಧ್ರಪ್ರದೇಶದಿಂದ ಬೆಂಗಳೂರು ನಗರಕ್ಕೆ ರಾತ್ರಿ ವೇಳೆಯಲ್ಲಿ ಮರಳು ಅಕ್ರಮ ಸಾಗಾಟ ತಾಲೂಕಿನ ಗಡಿ ಭಾಗದ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಬಾಗೇಪಲ್ಲಿ ಮತ್ತು ಚೇಳೂರು ಪೊಲಿಸರಿಗೆ ತಲೆನೋವಾಗಿ ಪರಿಣಮಿಸಿದೆ.
ಪಾತಪಾಳ್ಯ ಪೊಲೀಸ್ ಠಾಣೆ ಗಡಿಭಾಗದಲ್ಲಿರುವ ಆಂಧ್ರಪ್ರದೇಶದ ಅಮಡಗೂರು ಬಳಿಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ವಾಹನವನ್ನು ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ಪೊಲೀಸರು ಕಾರಕೂರು ಕ್ರಾಸ್ ಬಳಿ ಮರಳು ಸಮೇತ ವಾಹನವನ್ನು ವಶಕ್ಕೆ ಪಡೆದು, ಬಾಗೇಪಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ನಂತರ ವಾಹನ ಮಾಲೀಕರಿಗೆ 79 ಸಾವಿರ ರೂ ದಂಡ ವಿಧಿಸಿರುತ್ತಾರೆ ಎಂದು ತಿಳಿದು ಬಂದಿದೆ.