ಸುದ್ದಿಮೂಲ ವಾರ್ತೆ
ಮೈಸೂರು, ಆ.18 : ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದೀಗ ಪದೇ ಪದೇ ಮೋದಿ ಅವರನ್ನೇ ಭೇಟಿ ಮಾಡುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಟೀಕಿಸಿದ್ದಾರೆ.
ಸರ್ಕಾರದ ವಿರುದ್ಧ ವೈಎಸ್ಟಿ, ಎಸ್ಎಸ್ಟಿ ಟ್ಯಾಕ್ಸ್ ಎಂದು ಮಾಡಿದ್ದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ವೈಯಕ್ತಿಕವಾಗಿ ಕುಮಾರಸ್ವಾಮಿ ಅವರ ಬಗ್ಗೆ ಬಹಳ ಗೌರವ ಇದೆ. ನಾವು ಹೆಚ್ ಡಿಕೆ ಟ್ಯಾಕ್ಸ್ ಅಂತ ಹೆಸರು ಕೊಡಬಹುದು. ಹಳೇ ಮೈಸೂರು ಭಾಗದಲ್ಲಿ ಅವರ ಅವಕಾಶವಾದಿ ರಾಜಕಾರಣ ಎಲ್ಲರಿಗೂ ಗೊತ್ತಿದೆ. ರಾಜ್ಯಾಧ್ಯಕ್ಷರನ್ನು ಬಿಟ್ಟು ಕುಟುಂಬ ರಾಜಕಾರಣ ಮಾಡ್ತಾರೆ. ಇಂತವರು ಕಾಂಗ್ರೆಸ್ ಬಗ್ಗೆ ಆರೋಪ ಮಾಡ್ತಾರೆ ಎಂದು ಕಿಡಿಕಾರಿದರು.
ಮೋದಿ ನೋಡಿ ಮತ ಹಾಕಿಲ್ಲ
ಬಿಜೆಪಿಯವರು ಹತಾಶರಾಗಿದ್ದು, ಅವರಿಗೆ ಗಾಯದ ಮೇಲೆ ಉಪ್ಪು ಸುರಿದ ಹಾಗೆ ಆಗಿದೆ. ರಾಜ್ಯದಲ್ಲಿ ಮೋದಿ ಪರವಾದ ಅಲೆ ಇಲ್ಲ. ಮೋದಿಯವರ ಮುಖ ನೋಡಿ ಯಾರೂ ಮತ ಹಾಕುತ್ತಿಲ್ಲ ಎಂದು ಟೀಕಿಸಿದರು.
ನಾಲ್ಕು ಗ್ಯಾರಂಟಿಗಳು ಜನರನ್ನ ತಲುಪುತ್ತಿವೆ. ಇದು ಬಿಜೆಪಿಯವರ ನಿದ್ದೆ ಕೆಡಿಸಿದೆ. ಹಾಗಾಗಿ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಬಿಜೆಪಿ ಕಳೆದ ಹಲವು ವರ್ಷಗಳಿಂದ ಪ್ರಬಲವಾಗಿರುವವರ ಮೇಲೆ ದಾಳಿ ಮಾಡುತ್ತಿದೆ. ಐಟಿ, ಇಡಿ ಮೂಲಕ ಪ್ರತಿ ಪಕ್ಷಗಳ ಹತ್ತಿಕ್ಕುವ ಕೆಲಸ ಆಗುತ್ತಿದೆ. ಜಾರಿ ನಿರ್ದೇಶನಾಲಯದ ಸಂಸ್ಥೆಗಳನ್ನು ತಮ್ಮ ಅಣತಿಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.