ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.18: ರಾಜ್ಯ ಬಿಜೆಪಿಗೆ ಪುನಶ್ಚೇತನ ನೀಡಲು ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ಅಂತಿಮ ರೂಪ ನೀಡುತ್ತಿದ್ದು, ಬಹುತೇಕ ದಸರಾ ವೇಳೆಗೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಆಗಲಿದೆ ಎಂಬ ನಿರೀಕ್ಷೆ ಇದೆ. ವಿಶೇಷವೆಂದರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಸದ್ಯ ಅಧ್ಯಕ್ಷರಾಗಿವರ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಈಗಾಗಲೇ ಪೂರ್ಣಗೊಂಡಿದ್ದು, ತಾತ್ಕಾಲಿಕವಾಗಿ ಮುಂದುವರಿದ್ದಾರೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ವೇಳೆ ಹೊಸ ರಾಜ್ಯಾಧ್ಯಕ್ಷರ ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಗೆ ಪುನಶ್ಚೇತನ ನೀಡುವ, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸುವ ಅಧ್ಯಕ್ಷರ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೊಸ ಮುಖಕ್ಕೆ ಮಣೆ ಹಾಕಬೇಕು ಎಂದು ಹೈಕಮಾಂಡ್ ನಿರ್ಧರಿಸಿದರೂ ಸಹ ಚುನಾವಣೆ ಸಂದರ್ಭದಲ್ಲಿ ಹಿರಿಯರ ವಿರೋಧ ಕಟ್ಟಿಕೊಳ್ಳುವುದು ಬೇಡ ಎಂದು ಶೋಭಾ ಕರಂದ್ಲಾಜೆ ಅವರನ್ನು ಅಧ್ಯಕ್ಷೆ ಸ್ಥಾನಕ್ಕೆ ನೇಮಿಸಲು ಮುಂದಾಗಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ.
ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿಗಳ ಮೂಲಕ ಮುಖ್ಯವಾಗಿ ಮಹಿಳೆಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಬಿಜೆಪಿಗೂ ಸಹ ಮೊದಲ ಬಾರಿಗೆ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಿದರೆ ಅದು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿ ಆಗಬಹುದು ಎಂದೂ ಸಹ ಚಿಂತಿಸಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ. ರವಿ, ಅರವಿಂದ ಲಿಂಬಾವಳಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಮತ್ತೊಂದೆಡೆ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕರ ಮಾತು ಕೇಳಿ ಎರಡೂ ಕಡೆ ಸ್ಪರ್ಧಿಸಿ ಸೋತಿರುವ ವಿ. ಸೋಮಣ್ಣ ಅವರು ತಮ್ಮನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ನೇರವಾಗಿಯೇ ಕೇಳಿದ್ದರು. ಆದರೆ, ಇವರೆಲ್ಲರನ್ನೂ ಹೊರತು ಪಡಿಸಿ ಅಚ್ಚರಿಯ ರೀತಿಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಮತ್ತೆ ರಾಜ್ಯ ರಾಜಕಾರಣಕ್ಕೆ ಕರೆತರಲು ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗಿದೆ.
ಯಡಿಯೂರಪ್ಪ ಸಮ್ಮತಿ?
ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಬಿಜೆಪಿಯನ್ನು ಚಲಾವಣೆಗೆ ತರುವುದು ಕಷ್ಟಸಾಧ್ಯ ಎಂದು ಅರಿತಿರುವ ಹೈಕಮಾಂಡ್ ನಾಯಕರನ್ನು ಯಡಿಯೂರಪ್ಪ ಅವರೊಂದಿಗೆ ವಿಶ್ವಾಸ ಇರುವವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಬೇಕು ಎಂದು ನಿರ್ಣಯಿಸಿದ್ದಾರೆ. ಹೀಗಾಗಿ ಶೋಭಾ ಕರಂದ್ಲಾಜೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರೆ ಅವರಿಂದಲೂ ಯಾವುದೇ ರೀತಿಯ ವಿರೋಧ ಬಾರದು ಎಂದು ನಿರೀಕ್ಷಿಸಲಾಗಿತ್ತಿದೆ.
ಈ ಮಧ್ಯೆ ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಆಶಯ ವ್ಯಕ್ತಪಡಿಸಿದ್ದರು. ಅದನ್ನು ಯಡಿಯೂರಪ್ಪ ಅವರ ಮುಂದೆ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಆದರೆ, ಯಡಿಯೂರಪ್ಪ ಅವರ ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ಇದರಿಂದ ಪಕ್ಷದಲ್ಲಿ ಮತ್ತಷ್ಟು ಅಸಮಾಧಾನ ಉಂಟಾಗಬಹುದು ಎಂಬ ಕಾರಣದಿಂದ ಹೈಕಮಾಂಡ್ ನಾಯಕರು ಇದಕ್ಕೆ ಸಮ್ಮತಿಸಿಲ್ಲ ಎಂದು ಹೇಳಲಾಗಿದೆ.
ಯಡಿಯೂರಪ್ಪ ಮತ್ತು ಅವರ ವಿರೋಧಿ ಬಣಗಳೂ ಸಹ ಒಪ್ಪುವಂತಹ ಒಮ್ಮತದ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಉದ್ದೇಶಿಸಲಾಗಿತ್ತು. ಅದರಂತೆ ಶೋಭಾ ಕರಂದ್ಲಾಜೆ ಅವರ ಹೆಸರು ಕೇಳಿಬಂದಾಗ ಎಲ್ಲರ ಸಮ್ಮತಿಯೂ ಇದ್ದರಿಂದ ಅವರನ್ನೇ ಬಹುತೇಕವಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ದಸರಾ ವೇಳೆಗೆ ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸಿ ಘೋಷಣೆ ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ಶೋಭಾ ಕರಂದ್ಲಾಜೆ ಅವರ ಹೆಸರೇ ಅಂತಿಮಗೊಂಡರೆ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.
ವಿಪಕ್ಷ ನಾಯಕರ ಆಯ್ಕೆ ಮತ್ತಷ್ಟು ವಿಳಂಬ?
ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿ ಐದು ತಿಳಾದರೂ ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೆ ವಿಪಕ್ಷ ನಾಯಕರ ಆಯ್ಕೆ ಆಗಿಲ್ಲ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವುದರಿಂದ ಸದ್ಯ ವಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸುವುದು ಬಹುತೇಕ ಅನುಮಾನ. ಇನ್ನೂ ಒಂದೆರಡು ತಿಂಗಳುಗಳ ಕಾಲ ವಿಪಕ್ಷ ನಾಯಕರ ಆಯ್ಕೆ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.