ಆನೇಕಲ್, ಅ. 18 : ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ. ಘಟನಾ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಪರಮೇಶ್ವರ, ರಾಜ್ಯದಲ್ಲೂ ದೆಹಲಿ ಮಾದರಿಯಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ ಇದೆ. ಆದರೆ ಕಾನೂನಿನ ಸಾದಕ ಬಾದಕ ಗಮನಿಸಿ ಕನಿಷ್ಠ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಮಾಡಲು ಪ್ರಯತ್ನಿಸಲಾಗುವುದು. ಅತ್ತಿಬೆಲೆ ಪಟಾಕಿ ದುರಂತದಲ್ಲಿ 17 ಮಂದಿ ಸಾವನ್ನಪ್ಪಿರುವುದು ಬೇಸರದ ಸಂಗತಿಯಾಗಿದೆ. ಪಟಾಕಿ ಮಳಿಗೆ ಮಾಲೀಕ 2017 ರಿಂದ 2022 ವರೆಗೆ ಪರವಾನಗಿ ಪಡೆದಿದ್ದು, ಲೈಸೆನ್ಸ್ ನವೀಕರಣದ ನಡುವೆ ಫೇಕ್ ಲೈಸೆನ್ಸ್ ಸೃಷ್ಟಿಸಿದ್ದಾರೆ. ಅದರಲ್ಲು ಕೇವಲ 1 ಸಾವಿರ ಕೆಜಿ ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆದಿದ್ದು, 50 ಟನ್ ಗೂ ಅಧಿಕ ಪಟಾಕಿ ಅಕ್ರಮವಾಗಿ ದಸ್ತಾನು ಮಾಡಿದ್ದಾರೆ. ಪರಿಶೀಲನೆ ವೇಳೆ ತಹಶಿಲ್ದಾರ್ ಸೇರಿದಂತೆ ಪೊಲೀಸ್, ಪೈರ್ ಮತ್ತು ಟ್ರಾನ್ಸ್ಪೋರ್ಟ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ತಮಿಳುನಾಡು ಗಡಿಯಲ್ಲಿ ಆರ್ಟಿಓ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಿಲ್ಲ ಎಂದ ಅವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.