ಆನೇಕಲ್,ಅ.19: ನಾಯಕತ್ವ ಹಾಗೂ ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಕೊಂಡಜ್ಜಿ ಬಿ. ಷಣ್ಮುಖಪ್ಪ ಹೇಳಿದರು.
ಪಟ್ಟಣದ ನ್ಯೂ ಬಾಲ್ಡ್ವಿನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯಮಟ್ಟದ ಜಿಲ್ಲಾ ತರಬೇತಿ ಆಯುಕ್ತರುಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಕೇವಲ ಮಕ್ಕಳಿಗಷ್ಟೇ ಅಲ್ಲದೆ, ಹಿರಿಯರಿಗೂ ಸಹ ಜೀವನ ಪಾಠ ಕಲಿಯಲು ದೊರೆಯುತ್ತದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಆಯುಕ್ತರಾದ ಚಿನ್ನಸ್ವಾಮಿ ರೆಡ್ಡಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಯಾವುದೇ ವ್ಯಕ್ತಿಯಲ್ಲಿ ಹುದುಗಿರಬಹುದಾದ ಕಲೆ, ಕೌಶಲ್ಯಗಳನ್ನು ಗುರುತಿಸಿ ಅದನ್ನು ಹೊರತಂದು ಅವರ ಆತ್ಮ ಸ್ಥೈರ್ಯ ಹೆಚ್ಚಾಗುವಂತೆ ಮಾಡುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ, ಜಿಲ್ಲಾ ಆಯುಕ್ತೆ (ಗೈಡ್ಸ್) ಭಾಗ್ಯ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಎ.ಎನ್. ನರೇಂದ್ರ ಕುಮಾರ್, ಖಜಾಂಚಿ ಸಿ. ಲಕ್ಷ್ಮೀಕಾಂತರಾಜು, ಮುನಿಕೃಷ್ಣಪ್ಪ, ಆರ್.ಎಲ್.ನಾರಾಯಣಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.