ಬೆಂಗಳೂರು,ಅ.21: ಅಕ್ರಮ ಮತದಾರರ ಸೃಷ್ಟಿಗೆ ಸಚಿವ ಬೈರತಿ ಸುರೇಶ್ ಅವರು ಕಾರಣರು. ಆದ್ದರಿಂದ ಬೈರತಿ ಸುರೇಶ್ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಅಲ್ಲದೆ, ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರ್ ಅವರ ಆತ್ಮಹತ್ಯೆ ಪ್ರಕರಣ ದಾರಿ ತಪ್ಪದೆ ಇರಲು ಶರಣಪ್ರಕಾಶ ಪಾಟೀಲರು ಕೂಡ ರಾಜೀನಾಮೆ ಕೊಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರಕಾರ ಅನೇಕ ಜನ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸುತ್ತಿದೆ. ಹಣ ಸಂಗ್ರಹದಲ್ಲಿ ಮತ್ತು ಕುಕೃತ್ಯಗಳಲ್ಲಿ ಒಬ್ಬ ಸಚಿವರು ಇನ್ನೊಬ್ಬ ಸಚಿವರನ್ನು ಮೀರಿಸುತ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾದ ಕೃತ್ಯಗಳನ್ನೂ ಮಾಡುತ್ತಿದ್ದು, ಅದಕ್ಕೆ ಬೈರತಿ ಸುರೇಶ್ ಅವರು ತಾಜಾ ಉದಾಹರಣೆ ಎಂದು ಆಕ್ಷೇಪಿಸಿದರು.
ಬೈರತಿ ಸುರೇಶ್ ಅವರು ಅಕ್ರಮ ಮತದಾರರನ್ನು ಸೃಷ್ಟಿಸಿ ಗೆದ್ದು ಬಂದಿದ್ದಾರೆ. ಸಾವಿರಾರು ನಕಲಿ ಮತದಾರರನ್ನು ಸೃಷ್ಟಿಸಿದ್ದಾರೆ. ನಿನ್ನೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಎಂಎಸ್ಎಲ್ ಟೆಕ್ನೊ ಸೊಲ್ಯೂಷನ್ಸ್ನ ಮೌನೇಶ್ ಕುಮಾರ್ ಎನ್ನುವ ಕಿಂಗ್ ಪಿನ್ ಸಿಕ್ಕಿಬಿದ್ದಿದ್ದಾನೆÉ. ಆಗ ಅಕ್ರಮವಾಗಿ ಮತದಾರರನ್ನು ಸೃಷ್ಟಿಸುವ ಕುಕೃತ್ಯ, ಅಕ್ರಮವಾಗಿ ಫೋಟೊ ಸಂಗ್ರಹಿಸಿ ಆಧಾರ್ ಕಾರ್ಡ್ ಸೃಷ್ಟಿ, ಐಡಿಗಳ ಸೃಷ್ಟಿ, ಸೃಷ್ಟಿಸಿದ ನಕಲಿ ಡಿಎಲ್ ಸಾವಿರಾರು ಸಂಖ್ಯೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.
ಬೇರೆ ಬೇರೆ ವಿಳಾಸದಲ್ಲಿ ಒಬ್ಬ ವ್ಯಕ್ತಿಯ ಎರಡು ಮೂರು ಆಧಾರ್ ಕಾರ್ಡ್ ಇರಬಾರದು. ಇದು ಸಂವಿಧಾನಬಾಹಿರ ಕುಕೃತ್ಯ. ಇದರ ಸಮರ್ಪಕ ತನಿಖೆ ಮಾಡಬೇಕು. ಎಷ್ಟು ಸಂಖ್ಯೆಯಲ್ಲಿ ನಕಲಿ ಮತದಾರರನ್ನು ಸೃಷ್ಟಿಸಿದ್ದಾರೆ; ಎರಡು ಮೂರು ಆಧಾರ್ ಕಾರ್ಡ್ ಹೊಂದಿದವರ ಸಂಖ್ಯೆ ಎಷ್ಟು? ಇಂಥ ಎಷ್ಟು ಕೇಂದ್ರಗಳಿವೆ?- ಇದೆಲ್ಲದರ ಸಂಪೂರ್ಣ ತನಿಖೆ ಆಗಬೇಕು. ತನಿಖೆ ಆಗಿ ವರದಿ ಬರುವವರೆಗೆ ಬೈರತಿ ಸುರೇಶ್ ಅವರು ರಾಜೀನಾಮೆ ಕೊಡಬೇಕು. ನಿಷ್ಕಳಂಕ, ಪಾರದರ್ಶಕ, ಪ್ರಭಾವರಹಿತ ತನಿಖೆ ನಡೆಯಲು ಬೈರತಿ ಸುರೇಶ್ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಮೌನೇಶ್ ಮಗನ ಜೊತೆ ಬೈರತಿ ಸುರೇಶ್ ಫೋಟೋ ಸಿಕ್ಕಿದೆ ಎಂದೂ ಆರೋಪಿಸಿದರು. ರಾಜ್ಯದಾದ್ಯಂತ ಇಂಥ ಲಕ್ಷಾಂತರ ನಕಲಿ ಮತದಾರರನ್ನು ಸೃಷ್ಟಿಸಿರಬಹುದು. ಆದ್ದರಿಂದ ಈ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರಲ್ಲದೆ, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಪ್ರಶ್ನೆಗೆ ಉತ್ತರ ಕೊಟ್ಟರು.
ಕಿರುಕುಳದಿಂದಲೇ ಆತ್ಮಹತ್ಯೆ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಶಿರೋಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರ್ ಅವರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ಶಿವಕುಮಾರ್ ಪೂಜಾರ್ ಅವರು ಡಾ. ಶರಣಪ್ರಕಾಶ್ ಪಾಟೀಲರ ಕಿರುಕುಳದಿಂದ ನೊಂದು, ಬೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಡಿದ ಕಾಮಗಾರಿಗಳಿಗೆ ಸಂಬಂಧಿಸಿದ ಬಾಕಿ ಹಣ ಬಿಡುಗಡೆ ವಿಳಂಬದ ಮೂಲಕ ಮತ್ತು ತಂದೆ ಜೊತೆ ಜಮೀನಿನಲ್ಲಿದ್ದ ವೇಳೆ ಸಾಕಷ್ಟು ಜನ ಹಲ್ಲೆ ಮಾಡಿದ್ದರಿಂದ ಅವರು ನೊಂದಿದ್ದರು. ಡಾ. ಶರಣಪ್ರಕಾಶ್ ಪಾಟೀಲರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆಡಿಯೋ ರೆಕಾರ್ಡ್ ಕೂಡ ಇದೆ ಎಂದು ವಿವರಿಸಿದರು.
ಇದರ ನಡುವೆ ಅವರ ಮನೆಗೆ ಹೋಗಿ ಏನೋ ಮಾತುಕತೆ ನಡೆಸಿ, ಒತ್ತಡ ಹೇರಿ ಅವರ ಪತ್ನಿಯಿಂದ ‘ನನ್ನ ಗಂಡ ಸಾಲ ಮಾಡಿದ್ದರು; ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿನಾ ಬೇರೆ ಕಾರಣದಿಂದಲ್ಲ’ ಎಂದು ದೂರು ಕೊಡುವಂತೆ ಮಾಡಿದ್ದಾರೆ. ಆದರೆ ಸತ್ಯ ಏನೆಂದರೆ ಡಾ. ಶರಣಪ್ರಕಾಶ್ ಪಾಟೀಲರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡ ಆಡಿಯೋ ರೆಕಾರ್ಡ್ ಇದೆ; ಸಾಕ್ಷಿಯೂ ಇದೆ ಎಂದು ತಿಳಿಸಿದರು.
ಈ ಭಾಗದಲ್ಲಿ ಇಬ್ಬರು ಸಚಿವರಿದ್ದು ದೊಡ್ಡ ಪ್ರಭಾವ ಬೀರಬಹುದು; ಈ ಸಂಬಂಧ ಪ್ರತ್ಯಕ್ಷ ಮಾಹಿತಿ ಪಡೆಯಲು ನಾಳೆ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ್ ಜಾಧವ್, ನಾನು, ವಿಧಾನಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಶೀಲ್ ನಮೋಶಿ, ಶಾಸಕರಾದ ಬಸವರಾಜ ಮತ್ತೀಮೂಡ್, ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಶಿವರಾಜ್ ಪಾಟೀಲ್ ರದ್ದೇವಾಡಿ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಮಾಜಿ ಶಾಸಕರಾದ ಸಿದ್ದು ಸವದಿ, ಮಾಜಿ ಶಾಸಕ ಹಾಗೂ ರಾಜ್ಯ ವಕ್ತಾರ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸೇರಿ 12 ಜನರ ತಂಡವು ಶಿರೋಳ್ಳಿ ಗ್ರಾಮಕ್ಕೆ ತೆರಳಲಿದೆ. ಶಿವಕುಮಾರ್ ಪೂಜಾರ್ ಅವರ ಮನೆಗೆ ಭೇಟಿ ನೀಡಿ ಏನಾಗಿದೆ ಎಂಬ ವರದಿಯನ್ನು ತರಲಿದೆ. ಸರಕಾರಕ್ಕೆ ಅದನ್ನು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಸಿಐಡಿ ತನಿಖೆ ನಡೆಸುವುದಾಗಿ ಸರಕಾರ ತಿಳಿಸಿದೆ. ಪ್ರಭಾವದ ಕಾರಣದಿಂದ ತನಿಖೆಯ ದಾರಿ ತಪ್ಪಬಾರದು ಎಂಬ ಕಾರಣಕ್ಕೆ ನಾಳೆಯೇ ನಾವು ತೆರಳುತ್ತೇವೆ ಎಂದು ವಿವರ ನೀಡಿದರು.