ಸುದ್ದಿಮೂಲ ವಾರ್ತೆ
ಮೈಸೂರು,ಅ.21:ಪಾರಂಪರಿಕ ಕಟ್ಟಡಗಳ ಬಗ್ಗೆ ಅರಿವು ಮೂಡಿಸಿ ಸಂರಕ್ಷಿಸಲು ಇಂತಹ ಪಾರಂಪರಿಕ ನಡಿಗೆಗಳು ಅಗತ್ಯ ಎಂದು ಉಪ ಮೇಯರ್ ಡಾ.ಜಿ.ರೂಪ ಅಭಿಪ್ರಾಯಪಟ್ಟರು.
ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ, ಜನಸಾಮನ್ಯರಿಗೆ ಹಾಗೂ ಪ್ರವಾಸಿಗರಿಗೆ ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಬಗ್ಗೆ ತಿಳಿಸಲು ರಂಗಚಾರ್ಲುಭವನದಲ್ಲಿ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೈಸೂರು ಎಂದಾಕ್ಷಣ ನೆನಪಿಗೆ ಬರುವುದೇ ಯೋಗ ನಗರಿ, ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ ಹಾಗೂ ಪರಂಪರೆ ನಗರಿ ಎಂದು. ಇಂತಹ ಪರಂಪರೆಯುಳ್ಳ ನಗರಿಯ ಇತಿಹಾಸವನ್ನು ಪಾರಂಪರಿಕ ನಡಿಗೆಯ ಮೂಲಕ ತಿಳಿದುಕೊಳ್ಳಬೇಕು. ಮೈಸೂರಿನಲ್ಲೇ ಅನೇಕ ಪಾರಂಪರಿಕ ಕಟ್ಟಡಗಳಿವೆ. ಮೈಸೂರಿನಲ್ಲಿದ್ದು ಅವುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ರಂಗಚಾರ್ಲು ಪುರಭವನವನ್ನು ದಿವಾನ್ ರಂಗಚಾರ್ಲು ಅವರ ಸೇವೆಯ ಸವಿನೆನಪಿಗಾಗಿ 10 ನೇ ಚಾಮರಾಜ ಒಡೆಯರ್ ಅವರು 1884ರ ಏ.1 ರಂದು ಕಟ್ಟಿಸಿದರು. ಸಿಮೆಂಟ್ ಬಳಸದೆ ಕಟ್ಟಡವನ್ನು ನಿರ್ಮಿಸಿರುವುದು ಈ ಕಟ್ಟಡದ ವಿಶೇಷತೆಯಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಎಲ್ಲರೂ ಸಿಮೆಂಟ್ ಕಟ್ಟಡಗಳು ಹೆಚ್ಚು ಸಧೃಡವಾಗಿರುತ್ತದೆ ಎಂದು ನಂಬಿರುತ್ತಾರೆ. ಆದರೆ ಸಿಮೆಂಟ್ ಕಟ್ಟಡಗಳ ಆಯಸ್ಸು ಕೇವಲ 60 ರಿಂದ 70 ವರ್ಷಗಳು ಮಾತ್ರ. ಹೀಗಾಗಿ ಇಂತಹ ಕಟ್ಟಡಗಳನ್ನು ಮಾರ್ಟರ್ ಅನ್ನು ಬಳಸಿ ಕಟ್ಟಿದ್ದರಿಂದ ಇಂತಹ ಅನೇಕ ಕಟ್ಟಡಗಳು ಇಂದಿಗೂ ಕಾಣಸಿಗುತ್ತಿವೆ ಎಂದರು.
ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದ ಮಹಾಜನ ಕಾಲೇಜು, ಟೆರಿಷಿಯನ್ ಕಾಲೇಜ್, ಆಡಳಿತ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ 180ಕ್ಕೂ ಹೆಚ್ಚು ನೊಂದಣಿಗೊoಡಿದ್ದವರಿಗೆ ನಿವೃತ್ತ ಪ್ರೊ.ಡಾ.ಎನ್.ಎಸ್.ರಂಗರಾಜು ಹಾಗೂ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಅವರು ಕಟ್ಟಡಗಳ ಇತಿಹಾಸಗಳ ಬಗ್ಗೆ ವಿವರಿಸಿದರು.
ನಡಿಗೆಯು ಟೌನ್ ಹಾಲ್ ನಿಂದ ಪ್ರಾರಂಭವಾಗಿ ಸಿಲ್ವರ್ ಜೂಬಿಲಿ ಕ್ಲಾಕ್ ಟವರ್ ದೊಡ್ಡಗಡಿಯಾರ, ಫ್ರಿಮೇಸನ್ಸ್ ಕ್ಲಬ್, 10ನೇ ಚಾಮರಾಜ ಒಡೆಯರ್ ವೃತ್ತ, ಅರಮನೆ, 4ನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆರ್ಯುವೇದ ಕಾಲೇಜು ಹಾಗೂ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಕಾವೇರಿ ಎಂಪೋರಿಯo ಹಾಗೂ ಗಾಂಧಿ ವೃತ್ತವನ್ನು ಹಾದು ರಂಗಚಾರ್ಲು ಪುರಭವನದ ಹತ್ತಿರ ಮುಕ್ತಾಯಗೊಂಡಿತು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜ, ಉಪ ನಿರ್ದೇಶಕಿ ಮಂಜುಳ ಸೇರಿದಂತೆ ಹಲವರು ಭಾಗವಹಿಸಿದ್ದರು.