ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಅ. 21 : ಪಟ್ಟಣದ ಹಳೇ ತಾಲ್ಲೂಕು ಆಫೀಸ್ ರಸ್ತೆಯ ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನವರಾತ್ರಿ ಹಬ್ಬದ ಅಂಗವಾಗಿ ದೇವನಹಳ್ಳಿ ಪಟ್ಟಣದ ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಸರಸ್ವತಿಯ ಅಲಂಕಾರ ಮಾಡಲಾಗಿತ್ತು ಜಿಲ್ಲಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಅಮ್ಮನವರ ದರ್ಶನ ಪ್ರತಿ ವರ್ಷ ಪಡೆಯುತ್ತೇನೆ. ಈ ಬಾರಿ ರಾಜ್ಯದಲ್ಲಿ ಬರಗಾಲ ಎದುರಿಸುತ್ತಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆ ಬೆಳೆ ಆಗಿ ರಾಜ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸುಭಿಕ್ಷವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ ಎಂದರು.
ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ ಸಂಚಾಲಕ ಗಂಗಾಧರ್ ಮಾತನಾಡಿ, ಇಂದು ವಿಶೇಷವಾದ ದೇವಿಗೆ ಸರಸ್ವತಿ ಅಲಂಕಾರ ಮಾಡಿ ಜಿಲ್ಲಾಧಿಕಾರಿಗಳಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು ಹಾಗೂ ನವರಾತ್ರಿ ಅಂಗವಾಗಿ ಪ್ರತಿ ದಿನ ಒಂದೊಂದು ಅಲಂಕಾರದೊಂದಿಗೆ ದೇವಿ ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದು ನಿನ್ನೆ ದುರ್ಗಾ ದೀಪ ಅಲಂಕಾರ ಮಾಡಿ ಇನ್ನು ಎರಡು ದಿನ ವಿವಿಧ ಅಲಂಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕೊನೆಯ ದಿನ ಅಮ್ಮನವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊತ್ತು ಮೆರವಣಿಗೆ ವಿಶೇಷ ವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವನಹಳ್ಳಿ ತಹಶಿಲ್ದಾರ್ ಶಿವರಾಜ್, ಎಸ್.ಅರ್.ಮುನಿರಾಜು, ಜಯರಾಂ, ಸೇರಿದಂತೆ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಭಕ್ತಾದಿಗಳು ಇದ್ದರು.