ಸುದ್ದಿಮೂಲ ವಾರ್ತೆ
ಚಿತ್ರದುರ್ಗ, ಅ.22: ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಅವರು ನೂತನವಾಗಿ ಸಿಡಬ್ಲ್ಯೂಸಿ ಸದಸ್ಯರಾಗಿ ನೇಮಕವಾದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ತರಾಸು ರಂಗಮಂದಿರದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಕಾರ್ಯಕ್ರಮವನ್ನ ಉಧ್ಘಾಟಿಸಿದರು. ಇದಕ್ಕೂ ಮುನ್ನ ಸಿಡಬ್ಲ್ಯೂಸಿ ಸದಸ್ಯರಾಗಿ ಮೊದಲ ಬಾರಿಗೆ ಡಾ.ನಾಸೀರ್ ಹುಸೇನ್ ಹಾಗೂ ಸಚಿವರಾಗಿ ಮೊದಲ ಬಾರಿಗೆ ಚಿತ್ರದುರ್ಗ ನಗರಕ್ಕೆ ಅಗಮಿಸಿದ ಬಿ.ನಾಗೇಂದ್ರ ಅವರನ್ನ ನಗರದ ಹೊರವಲಯದಲ್ಲಿ ಭರ್ಜರಿ ಸ್ವಾಗತ ಮಾಡಿ, ತೆರೆದ ಕಾರಿನಲ್ಲಿ ಮೆರವಣಿಗೆ ಮೂಲಕ ಬರ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ಮಾತನಾಡಿ, ತವರು ಜಿಲ್ಲೆಯಲ್ಲಿ ದೊರೆಯುವ ಸನ್ಮಾನ ಎಲ್ಲಾ ಪ್ರಶಸ್ತಿಗಳಿಂತ ಮಿಗಿಲಾದುದು. ಅಂತಹ ಅತ್ಮೀಯ ಅಭಿನಂದನಾ ಕಾರ್ಯಕ್ರಮವನ್ನ ಗಂಡು ಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ನೀವು ಹಮ್ಮಿಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹ.
ನಾಸೀರ್ ಹುಸೇನ್ ಅವರು ಒಂದು ಜಿಲ್ಲೆಯ ಕಣ್ಮಣಿ ಅಲ್ಲ. ಎರಡು ಜಿಲ್ಲೆಗಳ ಕಣ್ಮಣಿ. ಅವರು ಚಿತ್ರದುರ್ಗದಲ್ಲಿ ಹುಟ್ಟಿ ಬೆಳೆದಿರಬಹುದು ಅವರ ವಿದ್ಯಾಬ್ಯಾಸ ಹೋರಾಟ ಎಲ್ಲಾ ಬಳ್ಳಾರಿಯಿಂದಲೇ ಅರಂಭವಾದದ್ದು, ವಿದ್ಯಾರ್ಥಿ ನಾಯಕರಾಗಿ, ಯುವ ಕಾಂಗ್ರೆಸ್ ನಾಯಕರಾಗಿದ್ದ ಅವರನ್ನ ಬಹಳ ಹಿಂದೆಯೇ ರಾಷ್ಟ್ರೀಯ ನಾಯಕರಾಗುತ್ತಾರೆ ಅಂತ ಗ್ರಹಿಸಿದ್ದೇವು. ಅದು ನಿಜವಾಗಿದೆ.
ನಾಸೀರ್ ಹುಸೇನ್ ಅವರ ಕೃಷಿ,ಸೇವೆ, ಪಕ್ಷದ ಬಗೆಗಿನ ನಿಷ್ಟೆ ಅವರನ್ನ ಇವತ್ತು ದೊಡ್ಡ ಮಟ್ಟದ ಪದವಿಯನ್ನು ಪಡೆಯುವಲ್ಲಿ ಯಶ ತಂದುಕೊಟ್ಟಿದೆ. ಅಸ್ಕರ್ ಫರ್ನಾಂಡಿಸ್ ನಂತರ ಖರ್ಗೆ ಅವರ ಜೊತೆಯಲ್ಲೂ ಹಗಲಿರಳು ಪಕ್ಷದ ಕಾರ್ಯ ಕಲಾಪದಲ್ಲಿ ಭಾಗಿಯಾಗುವ ಮೂಲಕ ಪಕ್ಷಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ದಲಿತರನ್ನ ಅಲ್ಪ ಸಂಖ್ಯಾತರನ್ನ, ಹಿಂದುಳಿದವರನ್ನ ಕಾಂಗ್ರೆಸ್ ಪಕ್ಷಕ್ಕೆ ತರಬೇಕು. ಕಟ್ಟಕಡೆಯ ವ್ಯಕ್ತಿಗೂ ಕೂಡ ಪಕ್ಷದ ಅಧಿಕಾರ ನೀಡುವ ಕನಸನ್ನ ಹೊಂದಿದ್ದಾರೆ. ದೂರದ ಗುಡ್ಡ ಕಣ್ಣಿಗೆ ನುಣ್ಣಗೆ ಅನ್ನೊ ರೀತಿಯಲ್ಲಿ ಕೆಲವರು ಬಹಳ ದೊಡ್ಡವರು ಅಂದುಕೊಂಡವರನ್ನು ಬಗ್ಗು ಬಡಿದು ಗೆದ್ದು ಬಂದಿದ್ದೇವೆ. ನಾನು ಮತ್ತು ನಾಸೀರ್ ಹುಸೇನ್ ಸೇರಿ ಬಿಜೆಪಿಯನ್ನ ಬಳ್ಳಾರಿಯಲ್ಲಿ ಬಗ್ಗು ಬಡಿಯುತ್ತೇವೆ. ನಾನು ಒಂದು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರನಾಗಿ, ಎರಡು ಬಾರಿ ಕಾಂಗ್ರೆಸ್ನಿಂದ ಗೆದ್ದು ಬಂದಿದ್ದೇನೆ. ನಾವು ಅವರ ಹಿಂದೆ ಇದ್ದವರಲ್ಲ ಅವರು ನಮ್ಮ ಹಿಂದೆ ಇದ್ದರು, ನಮ್ಮಿಂದಲೇ ಗೆಲ್ಲುತ್ತಿದ್ದರು ಎಂದು ಪರೋಕ್ಷವಾಗಿ ಮಾಜಿ ಸಚಿವ ಶ್ರೀರಾಮುಲು ಅವರನ್ನ ಕುಟುಕಿದರು.
ನಾಯಕರೆಂದರೆ ಅವರೇ ಬೆಳೆದು ನಾಯಕರಾಗುವುದಲ್ಲ. ಇತರರನ್ನ ಬೆಳೆಸುವ ಗುಣವುಳ್ಳವರು ನಿಜವಾದ ನಾಯಕರು. ಅಂತವರ ಸಾಲಿನಲ್ಲಿ ಡಾ.ಸಯ್ಯದ್ ನಾಸೀರ್ ಹುಸೇನ್ ನಿಲ್ಲುತ್ತಾರೆ. ಕಾರಣ ನನ್ನ ಬೆಳವಣಿಗೆಯಲ್ಲೂ ಅವರ ಪಾತ್ರವಿದೆ ಎಂದ ಅವರು ನಾಸೀರ್ ಹುಸೇನ್ ಅವರಿಗೆ ಎಲ್ಲೆ ಸನ್ಮಾನವಾದರೂ ನಾನು ಹೋಗುತ್ತೇನೆ. ಕಾರಣ ನನ್ನ ಮತ್ತು ಅವರ ನಡುವೆ ಇರುವ ಅತ್ಮೀಯತೆ. ಎಲ್ಲಾ ಕಡೆ ಸನ್ಮಾನ ಸಮಾರಂಭಗಳು ನಡೆಯುತ್ತಿವೆ. ಕೊನೆಗೆ ನೆನಪಿನಲ್ಲುಳಿಯುವಂತಹ ಕಾರ್ಯಕ್ರಮವನ್ನ ಬಳ್ಳಾರಿಯಲ್ಲಿ ಆಯೋಜಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುದಾಕರ್, ಶಾಸಕರುಗಳಾದ ಎನ್.ವೈ.ಗೋಪಾಲಕೃಷ್ಣ., ಬಿ.ಜಿ.ಗೋವಿಂದಪ್ಪ, ಕೆ.ಎಸ್.ಬಸವರಾಜ್, ಜಬ್ಬಾರ್, ಮಾಜಿ ಸಚಿವ ಹೆಚ್.ಆಂಜನೇಯ, ವಕ್ಫಬೋರ್ಡ್ ರಾಜ್ಯ ಅಧ್ಯಕ್ಷ ಅನ್ವರ್, ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ತಾಜ್ ಪೀರ್, ಪಾತ್ಯರಾಜ್ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು, ದಲಿತ , ಅಲ್ಪಸಂಖ್ಯಾತ ಮುಖಂಡರು ಭಾಗವಹಿಸಿದ್ದರು.