ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ.24: ಕೆರೆಗಳು ಅತ್ಯಂತ ಹಳೆಯದಾದ ಮಾನವನಿರ್ಮಿತ ರಚನೆ. ಕೆರೆ ಅಂಗಳ, ಹಳ್ಳಗಳು, ತೂಬು, ಕೋಡಿ, ಕಾಲುವೆಗಳು, ಅಚ್ಚುಕಟ್ಟು ಮುಂತಾದ ಅನೇಕ ಅಂಗಗಳನ್ನೊಳಗೊಂಡ ಕೆರೆ ವ್ಯವಸ್ಥೆ ಬಹೋಪಯೋಗಿ.
ಮುಖ್ಯವಾಗಿ ನೀರಾವರಿ, ಕುಡಿಯುವ ನೀರು, ಅಂತರ್ಜಲಮಟ್ಟ ಕಾಪಾಡುವಿಕೆ, ಮೀನುಗಾರಿಕೆ, ಫಲವತ್ತಾದ ಹೂಳು, ಮರಳು, ಇಟ್ಟಿಗೆ ಹಾಕಲು ಮಣ್ಣು ಹೀಗೆ ಹತ್ತು-ಹಲವು ರೀತಿಯಲ್ಲಿ ಕೆರೆಗಳು ಉಪಯುಕ್ತವಾಗಿವೆ.
ಆದುದರಿಂದಲೇ ನಮ್ಮ ಪೂರ್ವಿಕರು ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಹೆಚ್ಚಿನ ಮಹತ್ತ್ವ ನೀಡಿದ್ದರು. ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಕೃಷಿಆಧಾರಿತ ಜೀವನಾಧಾರಗಳ ಕೇಂದ್ರಬಿಂದುಗಳು ಕೆರೆಗಳೇ ಆಗಿದ್ದು, ಇವು ಸಮುದಾಯದ ಆಸ್ತಿಗಳು.
ಶತಮಾನಗಳ ಇತಿಹಾಸ ಹೊಂದಿರುವ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ್ತು ಬೈಲನ ರಸಾಪುರ ಗ್ರಾಮ ಪಂಚಾಯಿತಿ ಮಧ್ಯದಲ್ಲಿರುವ ಕೊಂಡ್ರಹಳ್ಳಿ ಗ್ರಾಮದ ಸರ್ವೇ ನಂಬರ್ 107ರಲ್ಲಿ ಸುಮಾರು 68 ಎಕರೆ ಹಾಗೂ ಬೈಲನರಸಪುರ ಸರ್ವೇ ನಂಬರ್ 70ರಲ್ಲಿ ಒಂಬತ್ತು ಎಕರೆ ವಿಸ್ತೀರ್ಣವಿರುವ ಕೆರೆಯ ಇಂದಿನ ದುಃಸ್ಥಿತಿಯನ್ನು ನೋಡಿದರೆ ಪರಿಸರದ ಬಗ್ಗೆ ಕಾಳಜಿ ಉಳ್ಳ ಯಾರೇ ಆಗಿದ್ದರೂ ಕೂಡ ಒಂದು ಕ್ಷಣ ಮೌನವಾಗಿ ಬಿಡುತ್ತಾರೆ. ಅಷ್ಟರಮಟ್ಟಿಗೆ ಅಧ್ವಾನವಾಗಿದೆ ಈ ಕೆರೆ.
ತ್ಯಾಜ್ಯದಿಂದ ಹಿಡಿದು ಪ್ಲಾಸ್ಟಿಕ್ ಮನೆ ತ್ಯಾಜ್ಯದರೆಗೆ ಇಲ್ಲಿಗೆ ತಂದು ಹಾಕುತ್ತಿದ್ದಾರೆ. ಬೈಲ ನರಸಾಪುರ ಗ್ರಾಮಸ್ಥರು ತನ್ನ ಸ್ವಾರ್ಥಕ್ಕೆ ಹೊರಗಡೆಯಿಂದ ಪ್ಲಾಸ್ಟಿಕ್ ತ್ಯಾಜ್ಯ ಲೋಡ್ ಕಟ್ಟಲೆ ತಂದು ಸುರಿದು ಇನ್ನೂ ಗಬ್ಬೆದ್ದು ನಾರುತ್ತಿದೆ. ಇದನ್ನು ನೋಡಿದರೆ ಇದೇನು ಕೆರೆಯೋ ಅಥವಾ ತ್ಯಾಜ್ಯವಿಲೇವಾರಿ ಘಟಕವೋ ಎಂದು ಭಾಸವಾಗುವುದು ಸುಳ್ಳಲ್ಲ.
ಒಂದೆಡೆ ಕೆರೆ ನೀರಿಲ್ಲದೆ ಭಣಗುಡುತ್ತಿದ್ದರೆ ಮತ್ತೊಂದೆಡೆ , ಕೆರೆಯ ಆವರಣ ಕಸ, ಕಟ್ಟಡ ತ್ಯಾಜ್ಯ ಸುರಿಯುವ ತಾಣವಾಗಿ ಮಾರ್ಪಟ್ಟಿದೆ. ಪರಿಣಾಮ ಸುತ್ತಮುತ್ತಲ ಜನ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಕೆರೆಯ ಪೂರ್ವ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ತಂದು ಸುರಿಯಲಾಗಿದೆ. ಹಾಗಾಗಿ ದೊಡ್ಡ ಗುಡ್ಡವೇ ನಿರ್ಮಾಣವಾಗಿದೆ. ಬದಿಯಲ್ಲಿ ರಾಶಿ ಕಟ್ಟಡ ತ್ಯಾಜ್ಯವನ್ನು ಮಾಡಲಾಗಿದೆ.
ಕಸದ ಕೊಂಪೆ:
ನಡುವಿನಪುರ ಕೆರೆ ಮಳೆ ಬಂದು ತುಂಬಿದರೆ ಆರು ಗ್ರಾಮಗಳಿಗೆ ಅನುಕೂಲ ಮತ್ತು ಸರ್ಕಾರ ಗ್ರಾಮಗಳಿಗೆ ಕೊಡುವ ನೀರಿಗೆ ಒಂಬತ್ತು ಕೊಳವೆ ಭಾಗಗಳನ್ನು ಕೊಡಿಸಲಾಗಿದೆ. ಹಾಗಾಗಿ ಕೆರೆ ಸುತ್ತಲೂ ಮತ್ತು ಹಳ್ಳಿ ಬೋಗಾದಿಯ ಕಸವನ್ನೆಲ್ಲ ಇಲ್ಲಿ ತಂದು ಸುರಿಯಲಾಗುತ್ತಿದೆ. ಬೀದಿನಾಯಿಗಳು, ಬಿಡಾಡಿ ದನಗಳು ಆಹಾರ ಹುಡುಕುತ್ತ ಈ ನಾಯಿ, ದನಗಳು ಚೆಲ್ಲಾಡುವ ಕಸ ಹೊರಗೆ ರಸ್ತೆಗೆ ಮಾತ್ರವಲ್ಲದೆ ಕೆರೆಗೂ ವ್ಯಾಪಿಸುತ್ತಿದೆ. ಕೆರೆಯ ಬೇಲಿ ಬದಿಯಲ್ಲೆಲ್ಲ ಈಗಾಗಲೇ ಕಸ ಹರಡಿಕೊಂಡಿದೆ. ಪಕ್ಕದಲ್ಲೆ ಮಳೆನೀರು ಚರಂಡಿಯೂ ಇದ್ದು, ಅಲ್ಲಿಗೂ ಕಸ ತಂದು ಸುರಿಯಲಾಗುತ್ತಿದೆ.
ಮುಂದೆ ಮಳೆ ಬಂದಾಗ ಆ ಕಸವೆಲ್ಲ ಕೆರೆ ಸೇರಿ ನೀರು ಮಲಿನಗೊಳ್ಳಲಿದೆ ಎಂಬ ಆತಂಕ ಇಲ್ಲಿನ ಕೆರೆ ಸುತ್ತಲಿನ ಗ್ರಾಮಸ್ಥರ ನಿವಾಸಿಗಳದ್ದು. ಮತ್ತೊಂದು ಕಡೆ ಕೊಳಚೆ ನೀರಿನಿಂದಾಗಿ ಗಿಡಗಳು ಇಡೀ ಕೆರೆಯನ್ನು ಆವರಿಸಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಬೈಲಾ ನರಸಾಪುರ ಕೆಲವರು ಅನಾಗರಿಕರು ಇದಕ್ಕೆ ತ್ಯಾಜ್ಯವನ್ನು ತಂದು ಎಳೆಯುತ್ತಿರುವುದು, ಅದನ್ನು ನೋಡಿಕೊಂಡು ಕಣ್ಮುಚ್ಚಿ ಕುಳಿತಿರುವುದು ಬೇಜವಾಬ್ದಾರಿತನ ಪರಮಾವಧಿ.
ಇಷ್ಟು ಮಾತ್ರವಲ್ಲದೆ, ಸುಮಾರು ಎಕರೆ ಪ್ರದೇಶಗಳ ಕೆರೆಯು ಒತ್ತುವರಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಬೈಲನರಸಾಪುರ ಪಿಡಿಒ ನಂದಗುಡಿ ಪಿಡಿಒ ಮತ್ತು ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಘನತ್ಯಾಜ್ಯಗಳ ಮತ್ತು ಚರಂಡಿ ನೀರನ್ನು ಜಲಮೂಲಗಳಿಗೆ ಹರಿಸುವುದರಿಂದ ಸಂಪೂರ್ಣವಾಗಿ ಹಾಳಾಗುತ್ತಿದೆ. ಸಿಮೆಂಟಿನ ಉಳಿಕೆ ಪದಾರ್ಥಗಳು, ಪ್ಲಾಸ್ಟಿಕ್ನ ಪದಾರ್ಥಗಳು ಮನೆಬಳಕೆಯ ಹಲವಾರು ವಸ್ತುಗಳ ರಾಸಾಯನಿಕಗಳು ಕೆರೆಕಟ್ಟೆಗಳಲ್ಲಿ ಇರುವಂತಹ ಜೀವಸಂಕುಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ.
ಈಗಲಾದರೂ ಸಂಬಂಧಪಟ್ಟಅಧಿಕಾರಿಗಳು ಮತ್ತ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಐತಿಹಾಸಿಕ
ಕೆರೆಯನ್ನು ಉಳಿಸುವ ಸಲುವಾಗಿ ಕೆರೆಯ ಸುತ್ತಲೂ ಫೆನ್ಸಿಂಗ್ ಅಳವಡಿಸಬೇಕು. ಜೊತೆಗೆ ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡುವಂತಹ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸಬೇಕು ಎಂದು ಸ್ಥಳೀಯರು
ಮತ್ತು ಪರಿಸರವಾದಿಗಳು ಒತ್ತಾಯ ಮಾಡಿದ್ದಾರೆ.
ನಂದುಗುಡಿ ಗ್ರಾಮ ಪಂಚಾಯಿತಿ ಮತ್ತು ಬೈಲನರಸಾಪುರ ಗ್ರಾಮ ಪಂಚಾಯಿತಿಗೆ ಕಸ ತ್ಯಾಜ್ಯ
ಸಂಬಂಧಿಸಿದಂತೆ ಮನವಿ ನೀಡಿದರು ಯಾವ ಪ್ರಯೋಜನವಾಗಿಲ್ಲ. ಮುಂದಿನ ದಿನದಲ್ಲಿ ನಮ್ಮ ತಾಲೂಕಿಗೆ
ಎತ್ತಿನಹೊಳೆ ಯೋಜನೆಯಲ್ಲಿ ಈಕೆರೆಗೂ ನೀರು ಬರುವ ಯೋಜನೆ ಇದ್ದು ಇನ್ನುಮುಂದೆ ಆದರೂ
ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕೆರೆಯನ್ನು ಉಳಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು.
– ಎನ್.ಮಂಜುನಾಥ್ ಗ್ರಾ.ಪಂ. ಸದಸ್ಯ;
ನಡುವಿನಪುರ ಗ್ರಾಮದಲ್ಲಿ ಪ್ರತಿ ಮನೆಗೆ ಎರಡು ಮೂರು ರಾಸುಗಳು ಮತ್ತು ರೇಷ್ಮೆ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದು ಕೆರೆ ಹಂಚಿನಲ್ಲಿ ತ್ಯಾಜ್ಯ ವಿಲೇವಾರಿಯಿಂದ ಗ್ರಾಮಕ್ಕೆ ತುಂಬಾ ಅನಾನುಕೂಲವಾಗಿದ್ದು ರಾಶಿಗೆ ಬೆಂಕಿ ಬಿದ್ದ ಮೇಲೆ ಬರುವ ದುರ್ವಾಸನೆಗೆ ಪ್ರಾಣಿಗಳಿಗೂ ಮನುಷ್ಯರಿಗೂ ತುಂಬ ತೊಂದರೆಯಾಗುತ್ತಿದೆ ಮತ್ತು ರೇಷ್ಮೆ ಸಾಕಾಣಿಕೆಗ ರೈತರು ಬೆಳೆಗಳನ್ನ ಕೈಸುಟ್ಟಿಕೊಂಡಿದ್ದಾರೆ ಈವರೆಗೂ ಚುನಾವಣೆ ಇತ್ತ ಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಯಾವ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.
– ರಾಜೇಶ್, ನಡುವಿನಪುರ ಗ್ರಾಮಸ್ಥ
ಬೈಲಾಸಪುರ ಗ್ರಾಮ್ ಪಂಚಾಯಿತಿಗೆ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ದೂರು ಬಂದಿದ್ದು ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದ್ದೇವೆ ತುರ್ತಾಗಿ ಜೆಸಿಬಿ ಮುಖಾಂತರ ತೆರವುಗೊಳಿಸಲಾಗುವುದು.
– ಮುನಿಗಂಗಪ್ಪ,
ಬೈಲ ನರಸಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ