ಸುದ್ದಿಮೂಲ ವಾರ್ತೆ
ನೆಲಮಂಗಲ, ಅ.24: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಬೆಂಗಳೂರು ಗ್ರಾಂಮಾಂತರ ಜಿಲ್ಲೆಯಿಂದ ಈ ಬಾರಿ ದಕ್ಷಿಣ ಕಾಶಿಯೆಂದೇ ಪ್ರಸಿದ್ಧವಾಗಿರುವ ಶಿವಗಂಗೆ ಮಾದರಿ ಪ್ರದರ್ಶನಗೊಂಡು ಇಲ್ಲಿನ ಇತಿಹಾಸಕ್ಕೆ ಮೆರಗು ತಂದಿದೆ.
ಸ್ತಬ್ಧಚಿತ್ರದಲ್ಲಿ ಮೊದಲಿಗೆ ಅಸೀನವಾಗಿರುವ ನಂದಿ, ಅದರ ಹಿಂದೆ ಶಿವಪಾರ್ವತಿಯ ದರ್ಶನ, ನಂತರದಲ್ಲಿ ಶ್ರೀ ಹೊನ್ನಮ್ಮದೇವಿ, ಗಂಗಾಧರೇಶ್ವರ ಸ್ವಾಮಿ ದೇಗುಲ, ಬೆಟ್ಟದ ಮಧ್ಯೆ ಸಿಗುವ ಗೋಪುರಗಳು, ಬೆಟ್ಟದ ತುದಿಯಲ್ಲಿರುವ ಬಸವಣ್ಣನ ವಿಗ್ರಹ, ಕುದುರೆ ಮೆಲೆ ಹೊರಟಿರುವ ನಾಡಪ್ರಭು ಕೆಂಪೇಗೌಡರ ಚಿತ್ರಣ, ಸುತ್ತಮುತ್ತಲ ಬೆಟ್ಟದ ವಿಹಂಗಮ ಚಿತ್ರಣ, ಕೊನೆಯಲ್ಲಿಯು ನಂದಿ ಆಸೀನವಾಗಿರುವ ಪ್ರವೇಶದ್ವಾರದ ಚಿತ್ರಣದ ನೀಲನಕ್ಷೆಯಂತೆ ಸ್ತಬ್ಧಚಿತ್ರ ತಯಾರಾಗಿ ಮರುಸೃಷ್ಟಿ ಕಾಣಲಿದೆ.
ದಸರಾ ಉತ್ಸವ ಮೈಸೂರಿನಲ್ಲಿ ನಡೆದ ದಸರಾ ಜಂಬೂ ಸವಾರಿ ಮುನ್ನ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಶಿವಗಂಗೆಯ ಇತಿಹಾಸ ಸಾರುವ ಸ್ತಬ್ಧಚಿತ್ರ ಆಯ್ಕೆಯಾಗಿತ್ತು. ಬೆಂ.ಗ್ರಾ. ಜಿಲ್ಲಾ ಪಂಚಾಯತ್ ಅಡಿ, ಖಾದಿ ಮತ್ತು ಗ್ರಾಮದ್ಯೋಗ ಇಲಾಖೆಯಿಂದ ಸ್ತಬ್ದ ಚಿತ್ರ ಅಂತಿಮ ರೂಪ ನೀಡಲಾಗಿದೆ.
ನಿಯಮಗಳಂತೆ, ಜಿ.ಪಂ ನಿಂದ ಜಿಲ್ಲೆಯ ಇತಿಹಾಸ ತಜ್ಞರು, ಕಲಾವಿದರು, ಸಾಹಿತಿಗಳಿಂದ ಸ್ತಬ್ಧಚಿತ್ರಕ್ಕಾಗಿ ಎರಡು ತಿಂಗಳ ಹಿಂದೆಯೇ ಸಲಹೆ ಸೂಚನೆ ಆಹ್ವಾನಿಸಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಎಂಟಕ್ಕೂ ಹೆಚ್ಚು ತಾಣಗಳ ಬಗ್ಗೆ ಸಲಹೆಗಳು ಬಂದಿದ್ದವು. ನೆಲಮಂಗಲದ ಶಿವಗಂಗೆ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ, ಹುಲುಕುಡಿ ಬೆಟ್ಟ, ದೇವನಹಳ್ಳಿಯ ಕೊಯಿರಾ, ಮಾಕಳಿ ದುರ್ಗ, ದೇವನಹಳ್ಳಿ ಕೋಟೆ ಪ್ರಮುಖವಾಗಿದ್ದವು. ಇದರಲ್ಲಿ ಶಿವಗಂಗೆಗೆ ಈ ವರ್ಷ ಅದೃಷ್ಟ ಲಭಿಸಿದೆ ಎನ್ನುತ್ತಾರೆ ಹಿರಿಯ ಇತಿಹಾಸಕಾರ, ಸಂಶೋಧಕ ಡಾ.ಗೋಪಾಲರಾವ್.
ಈ ಹಿಂದೆ ಶಿವಗಂಗೆ ಇತಿಹಾಸ ದೆಹಲಿಯ ಗಣರಾಜ್ಯೋತ್ಸವದಲ್ಲಿ ಕಂಡಿದ್ದೆವು. ಇದೀಗ ನಮ್ಮ ನಾಡಹಬ್ಬ ದಸರಾದಲ್ಲಿ ನೋಡುವುದು ಹೆಮ್ಮೆ ಎನಿಸುತ್ತದೆ ಎಂದು ಹೇಳುತ್ತಾರೆ ಲೇಕಖರಾದ ಎನ್.ಜಿ.ಗೋಪಾಲ್.