ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಅ.25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡಿ.ಡಿ.ಯು.ಜಿ.ಕೆ.ವೈ ಟಯೊ ವಿದ್ಯಾಸಂಸ್ಥೆಯಲ್ಲಿ ವಿಶ್ವ ಅಯೋಡಿನ್ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ ಮಹೇಶ್ ಕುಮಾರ್ ಎಸ್. ಎಸ್. ಮಾತನಾಡಿ, ದಿನನಿತ್ಯದ ಆಹಾರದಲ್ಲಿ ಅಯೋಡಿನ್ಯುಕ್ತ ಉಪ್ಪನ್ನು ಬಳಸುವುದರಿಂದ ಅಯೋಡಿನ್ ಕೊರತೆಗಳ ನಿಯಂತ್ರಣ ಸಾಧ್ಯ, ಸೂಕ್ಷ್ಮ ಪೋಷಕಾಂಶ ಹೊಂದಿದ್ದು, ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯವಶ್ಯಕ. ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ ಶಕ್ತಿಯ ನಷ್ಟ, ಮೆಳ್ಳೆಗಣ್ಣು ಸ್ನಾಯುಗಳ ಮರಗಟ್ಟುವಿಕೆ, ಕುಬ್ಜತನ, ನಡಿಗೆಯಲ್ಲಿ ಲೋಪದೋಷಗಳು ಮೂಕತನ, ಗರ್ಭಿಣಿಯರಲ್ಲಿ ಪದೇ ಪದೇ ಗರ್ಭಪಾತ, ಮಕ್ಕಳು ಸತ್ತು ಹುಟ್ಟುವ ಸಾಧ್ಯತೆ, ವಯಸ್ಕರಲ್ಲಿ ಕಾರ್ಯನಿರ್ವಹಣೆಯ ವೈಫಲ್ಯ, ಗಳಗಂಡ ರೋಗ ಬರುತ್ತದೆ ಎಂದು ತಿಳಿಸಿದರು.
ಪ್ರತಿದಿನ ಬೇಕಾಗುವ ಅಯೋಡಿನ್ ಅಂಶ ಪ್ರಮಾಣ ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ 150 ರಿಂದ 300 ಮೈಕ್ರೋ ಗ್ರಾಂ ನಷ್ಟು ಬೇಕಾಗುತ್ತದೆ ಸಮುದ್ರದ ಆಹಾರಗಳಾದ ಮೀನು ಸೀಗಡಿ ಹಾಗೂ ಸಮುದ್ರ ವೀಡ್ಸ್ಗಳಲ್ಲಿ ಅಯೋಡಿನ್ ಹೆಚ್ಚಾಗಿರುತ್ತದೆ.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್ ಮಾನತಾಡಿ, ಸಾಂಕ್ರಾಮಿಕ ರೋಗಗಳು, ಉತ್ತಮ ಆರೋಗ್ಯ ಶೈಲಿ, ಉಪ್ಪಿನಲ್ಲಿ ಅಯೋಡಿನ್ ಪರೀಕ್ಷಿಸುವ ವಿಧಾನಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ಎಸ್.ಒ ಡಾ. ಕೃಷ್ಣ ಪ್ರಸಾದ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಮಂಜುಳಾ, ಉಪ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ, ಟಯೊ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿತೀನ್ ಹಾಗೂ ತರಬೇತಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.