ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.26: ರಾಜ್ಯದ ಸರಕಾರಿ ಶಾಲಾ ಮಕ್ಕಳು ನಿರ್ಮಿಸಿರುವ ಪುನೀತ್ ಉಪಗ್ರಹ ಉಡಾವಣೆಗೆ ಮಾರ್ಚ್ 2024 ರ ತಿಂಗಳಲ್ಲಿ ಇಸ್ರೋ ಅವಕಾಶ ನೀಡುವ ಭರವಸೆಯಿದೆ ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು.
ಇಂದು ವಿಕಾಸಸೌಧದಲ್ಲಿ ಪುನೀತ್ ಉಪಗ್ರಹ ಯೋಜನೆಯ ಪ್ರಗತಿ ಕುರಿತು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ಸದಸ್ಯರೊಂದಿಗೆ ಸಭೆಯನ್ನು ನಡೆಸಿ ಅವರು ಮಾತನಾಡಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಭಾರತೀಯ ಉಪಗ್ರಹ ಸಂಶೋಧನಾ ಸಂಸ್ಥೆ ಮತ್ತು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ಯೂಬ್ಸ್ಯಾಟ್ ಸಬ್ಸಿಸ್ಟಮ್ಸ್ ವಿಷಯದಲ್ಲಿ ತರಬೇತಿ ನೀಡಲಾಗಿದ್ದು, ವಿದ್ಯಾರ್ಥಿಗಳು ಪುನೀತ್ ಸ್ಯಾಟಲೈಟ್ನ ಮೂಲಕ ಕಳುಹಿಸಲಾಗುವ ಸೆಕಂಡರಿ ಪ್ಲೇಲೋಡ್ ಗಳನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ. ಕ್ಯೂಬ್ಸ್ಯಾಟ್ ಸಬ್ಸಿಸ್ಟಮ್ಸ್ ನ ಪ್ರೊಟೋಟೈಪ್ ಇವಾಲ್ಯೂವೇಷನ್ ಬೋರ್ಡ್ಸ್ಗಳ ವ್ಯಾಲಿಡೇಷನ್ ಪ್ರಕ್ರಿಯೆ ಸದ್ಯ ಚಾಲ್ತಿಯಲ್ಲಿದೆ. ಅಲ್ಲದೇ, ಈ ಪ್ರಕ್ರಿಯೆಯಲ್ಲಿ ಸೂಚಿಸಲಾಗಿರುವ ಅಗತ್ಯ ಮಾರ್ಪಾಡುಗಳನ್ನು ಅಳವಡಿಸಲಾಗುತ್ತಿದೆ. ಐಟಿಸಿಎ ತಂಡ ಮಾರ್ಚ್ 2024 ರಲ್ಲಿ ಪುನೀತ್ ಸ್ಯಾಟ್ ಉಡಾವಣೆ ಸಾಧ್ಯ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಇಸ್ರೋ ಜೊತೆಗೆ ನಿರಂತರ ಸಂಪರ್ಕದಲ್ಲಿರುವಂತೆ ಸಂಸ್ಥೆಯ ಪದಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದರು.