ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 27 : ಹುಲಿಯ ಉಗುರು ಹೊಂದಿದ ಪೆಂಡೆಂಟ್ ಧರಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಕಳೆದ ಐದು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಕೋರ್ಟ್ ಜಾಮೀನು ನೀಡಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ವರ್ತೂರ್ ಸಂತೋಷ್ ಗೆ ಆಪ್ತರು ಭವ್ಯ ಸ್ವಾಗತ ಕೋರಿದರು. ಆದರೆ, ಸಂತೋಷ್ ಮಾತ್ರ ಹೆಚ್ಚೇನೂ ಮಾತನಾಡದೆ ಹೊರಟು ಹೋದರು.
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿರುವ ಅವರು ಮತ್ತೆ ಬಿಗ್ ಬಾಸ್ ಮನೆಗೆ ಹೋಗುತ್ತಾರಾ ಅಥವಾ ಮನೆಗೆ ಹೋಗುತ್ತಾರಾ ಎನ್ನುವ ಕುತೂಹಲ ಮೂಡಿದೆ. ಆಪ್ತರ ಪ್ರಕಾರ ಅವರ ಬಿಗ್ ಬಾಸ್ ಮನೆಗೇ ಹೋಗುತ್ತಾರೆ.
ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ಕೊರಳಿನಲ್ಲಿ ಹುಲಿಯುಗುರು ಇರುವ ಪೆಂಡೆಂಟ್ ಧರಿಸಿದ್ದನ್ನು ಟಿವಿಯಲ್ಲಿ ಗಮನಿಸಿದ ಅರಣ್ಯಾಧಿಕಾರಿಗಳು ಅತ್ಯುತ್ಸಾಹದಿಂದ ಅವರ ಮೇಲೆ ಕೇಸು ದಾಖಲಿಸಿದ್ದರು. ಕಳೆದ ಭಾನುವಾರ ಅವರನ್ನು ಬಿಗ್ ಬಾಸ್ ಮನೆಗೇ ಹೋಗಿ ಬಂಧಿಸಲಾಗಿತ್ತು. ಸೋಮವಾರ ಅವರನ್ನು ಕೋರ್ಟ್ಗೆ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅವರ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ನಡೆದು ಶುಕ್ರವಾರ ತೀರ್ಪು ನೀಡಲಾಯಿತು. ಇದರಲ್ಲಿ ಸಂತೋಷ್ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲು ಸೂಚಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿರುವ ಸಂತೋಷ್ ಕೆಲವೊಂದು ಕಾನೂನು ಮತ್ತು ಷರತ್ತಿನ ಪ್ರಕ್ರಿಯೆಗಳನ್ನು ಪೂರೈಸಬೇಕು. ಜತೆಗೆ ಕೋರ್ಟ್ನಲ್ಲಿ ವಿಚಾರಣೆ ಇರುವಾಗ ಹಾಜರಾಗಬೇಕಾಗಿದೆ.
ಈ ನಡುವೆ ಬಿಗ್ ಬಾಸ್ ಮನೆಯಿಂದ ಬಂಧನಕ್ಕೆ ಒಳಗಾದ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಹೋಗುತ್ತಾರಾ ಅಥವಾ ತಮ್ಮದೇ ಮನೆಗೆ ಹೋಗುತ್ತಾರಾ ಎನ್ನುವ ಕುತೂಹಲ ಎಲ್ಲ ಕಡೆ ಇದೆ.
ವರ್ತೂರು ಸಂತೋಷ್ ಪರ ವಕೀಲರು, ಸಂತೋಷ್ ಬಯಸಿದಲ್ಲಿ ಅವರು ಮತ್ತೆ ಬಿಗ್ಬಾಸ್ ಮನೆಗೆ ಹೋಗಬಹುದು ಅದಕ್ಕೆ ಯಾವುದೇ ಕಾನೂನು ತೊಡಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರ್ತೂರು ಸಂತೋಷ್ ಮೇಲೆ ಮಾಡಲಾಗಿರುವ ಆರೋಪ ಸಮನ್ಸ್ ನೀಡಿ ವಿಚಾರಣೆ ಮಾಡಬೇಕಾಗಿದ್ದ ಆರೋಪ ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅರ್ಥಹೀನ ಸೆಕ್ಷನ್ಗಳನ್ನು ಹೇರಿದ್ದಾರೆ. ಆದರೆ ನ್ಯಾಯಾಲಯವು ಯಾವುದೇ ಹೆಚ್ಚುವರಿ ಷರತ್ತುಗಳನ್ನು ವಿಧಿಸದೆ ಜಾಮೀನು ನೀಡಿದೆ. ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಸಂಪರ್ಕ ಬಯಸಿದಾಗ ಅವರಿಗೆ ಸಂಪರ್ಕಕ್ಕೆ ದೊರಕಬೇಕು ಎಂದಷ್ಟೆ ನ್ಯಾಯಾಲಯ ಹೇಳಿದೆ. ಹಾಗಾಗಿ ಅವರು ಬಿಗ್ಬಾಸ್ ಮನೆಗೆ ಹೋಗಬಹುದು ಎಂದಿದ್ದಾರೆ.
ಮತ್ತೆ ಬಿಗ್ ಬಾಸ್ ಗೆ ಹೋಗಬೇಕು
ಈ ನಡುವೆ ಪರಪ್ಪನ ಅಗ್ರಹಾರ ಜೈಲಿನ ಬಳಿ ಹೇಳಿಕೆ ನೀಡಿದ ಸಂತೋಷ್ ಅವರ ಆಪ್ತ ಮಧು ಅವರು, ಸಂತೋಷ್ ಮತ್ತೆ ಬಿಗ್ ಬಾಸ್ಗೆ ಹೋಗಿ ಜಯಶಾಲಿಯಾಗಿ ಹೊರಗೆ ಬರಲಿ ಎನ್ನುವುದು ನಮ್ಮೆಲ್ಲರ ಆಸೆಯಾಗಿದೆ. ಆದರೆ ಅವರು ಏನು ತೀರ್ಮಾನ ಮಾಡುತ್ತಾರೋ ಹಾಗೆ ನಡೆಯುತ್ತದೆ ಎಂದಿದ್ದಾರೆ.
ಜೈಲಿನಿಂದ ಹೊರ ಹೋದ ಬಳಿಕ ಮತ್ತಷ್ಟು ಹೆಸರು ಮಾಡ್ತಾರೆ ಎಂದು ತಿಳಿದು ಬೇಕು ಅಂತಲೇ ಟಾರ್ಗೆಟ್ ಮಾಡಿ ಈ ರೀತಿ ಸಿಲುಕಿಸಲಾಗಿದೆ. ದೊಡ್ಡದೊಡ್ಡ ನಟರು, ಉದ್ಯಮಿಗಳು ಹುಲಿ ಉಗುರು ಹಾಕಿಕೊಂಡಿದ್ದಾರೆ. ಆದರೆ, ವರ್ತೂರ್ ಸಂತೋಷ್ ಅವರನ್ನು ಮಾತ್ರ ಸಿಲುಕಿಸುವ ಕೆಲಸ ಮಾಡಲಾಗಿದೆ, ಅದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತದೆ. ನಮ್ಮ ಹಳ್ಳಿಕಾರ್ ಏನು ಅಂತ ನಮಗೆ ಚೆನ್ನಾಗಿ ಗೊತ್ತಿದೆ ಎಂದು ಸಂತೋಷ್ ಆಪ್ತ ಮಧು ಹೇಳಿದರು.