ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಅ.28:ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ ಎಂದು ಕನ್ನಮಂಗಲ ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮೀ ಕಾಂತ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮಪಂಚಾಯತಿ ವತಿಯಿಂದ ದೇವನಹಳ್ಳಿಯಲ್ಲಿ ನಡೆಯಲಿರುವ ಜಯಂತಿ ಕಾರ್ಯಕ್ರಮಕ್ಕೆ ಪಲ್ಲಕ್ಕಿಗೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.
ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದು ಬಣ್ಣಿಸಿದರು.
ಇದೆ ವೇಳೆ ಕೆಂಪತಿಮ್ಮನಹಳ್ಳಿ ಗ್ರಾ.ಪಂ.ಸದಸ್ಯೆ ಪವಿತ್ರ ಲಕ್ಷ್ಮೀಕಾಂತ್, ಕನ್ನಮಂಗಲ ಗ್ರಾ.ಪಂ.ಪಿ.ಡಿ.ಓ. ಶ್ರೀನಿವಾಸ್, ಸಮುದಾಯದ ಮುಖಂಡರಾದ ಗೋಪಾಲ್, ಆನಂದ್, ಸುರೇಶ್, ಮೂರ್ತಿ, ಎಂ.ವೆಂಕಟೇಶ್, ಮಂಜುನಾಥ್, ಆನಂದ್, ಸುನಿಲ್, ಮಂಜುನಾಥ್, ಗಂಗಾ, ಮುನಿಯಪ್ಪ, , ಗ್ರಾಮಸ್ಥರು ಇದ್ದರು.