ಸುದ್ದಿಮೂಲ ವಾರ್ತೆ
ಮೈಸೂರು, ಅ.29 :ಹತ್ತು ದಿನದಲ್ಲಿ ರೈತರಿಗೆ ಕಬ್ಬಿನ ಹೆಚ್ಚುವರಿ ಹಣ ಕೊಡಿಸದಿದ್ದರೆ ಕಬ್ಬು ಬೆಳೆಗಾರರು ಮೈಸೂರಿನ ಸಿಎಂ ಮನೆ ಮುಂದೆ ನ. 9 ರಂದು ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ರೈತರ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದಿನ ಸಾಲಿನಲ್ಲಿ ನಿಗದಿ ಮಾಡಿದ್ದ ಕಬ್ಬಿನ ಹೆಚ್ಚುವರಿ ದರ ಟನ್ ಗೆ 150 ರೂ. ಕೊಡಿಸಲು, ಪ್ರಸಕ್ತ ಸಾಲಿನ ದರ ಏರಿಕೆ ಮಾಡಲು ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಉತ್ಪಾದನಾ ವೆಚ್ಚ 3580 ರೂ ಸರ್ಕಾರ 3150 ನಿಗದಿ ಮಾಡಿದೆ ಕೂಡಲೇ ಪರಿಷ್ಕರಣೆ ಮಾಡಿ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಕಬ್ಬಿನ ಇಳುವರಿ ಹಾಗೂ ಪ್ರದೇಶ ಕಡಿಮೆಯಾಗಿದ್ದು ಶೇ. 50ರಷ್ಟು ಉತ್ಪಾದನೆ ಬರಗಾಲದ ಕಾರಣ ಕಡಿಮೆಯಾಗಿದೆ. ರೈತರು ಕಬ್ಬು ಕಟಾವಿನ ಬಗ್ಗೆ ಆತಂಕಗೊಳ್ಳದೆ ಹೆಚ್ಚು ದರ ನಿಗದಿ ಮಾಡುವ ತನಕ ಹೋರಾಟಕ್ಕೆ ಬೆಂಬಲಿಸಬೇಕು. ಹತ್ತು ದಿನದ ಗಡುವಿನೊಳಗೆ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಸರ್ಕಾರದ ಆದೇಶ ಧಿಕ್ಕರಿಸಿರುವ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ರೈತರ ಹಣ ಕೊಡಿಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಹದಗೆಡುವ ಮುನ್ನವೇ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.
ಕೃಷಿಪಂಪ್ ಸೆಟ್ ಗಳಿಗೆ ಕಣ್ಣುಮುಚ್ಚಾಲೆ ವಿದ್ಯುತ್, ಬರಗಾಲದಿಂದ ನರಳುತ್ತಿರುವ ರೈತರಿಗೆ ಮತ್ತೊಂದು ಮರ್ಮಘಾತ, ಮಳೆ ಕಡಿಮೆ ವಿದ್ಯುತ್ ಉತ್ಪಾದನೆ ಕುಂಠಿತ ಕಾರಣ ರೈತರಿಗೆ 5 ಗಂಟೆ ವಿದ್ಯುತ್ ಎನ್ನುತ್ತಾರೆ. ಇದೇ ಸರ್ಕಾರ ಕೈಗಾರಿಕೆಗಳಿಗೆ ಉದ್ಯಮಿಗಳಿಗೆ ಸಮರ್ಪಕ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತೆವೆ ಎನ್ನುತ್ತಾರೆ. ಸರ್ಕಾರದ ಇಬ್ಬಗೆ ನೀತಿ ಸರಿಅಲ್ಲ, ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಯಾವ ನ್ಯಾಯ ? ಎಂದು ಪ್ರಶ್ನಿಸಿದರು.
ನ. 6 -7 ರಂದು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆಯ ರಾಷ್ಟ್ರೀಯ ರೈತ ಸಂಸತ್ ಅಧಿವೇಶನ ದೆಹಲಿಯಲ್ಲಿ ನಡೆಯಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ರೈತರು ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್ ,ಹತ್ತಳ್ಳಿ ದೇವರಾಜ್, ಬರಡನಫುರ ನಾಗರಾಜ್,ಹಳಿಕರೆಹುಂಡಿ ಬಾಗ್ಯರಾಜ್,ಕಿರಗಸೂರ ಶಂಕರ, ಕುರುಬೂರು ಸಿದ್ದೇಶ್ ,ಹಾಡ್ಯರವಿ ,ಪಟೇಲ್ ಶಿವಮೂರ್ತಿ, ಲಕ್ಷ್ಮಿಪುರ ವೆಂಕಟೇಶ, ಮಹದೇವಸ್ವಾಮಿ,ಸುನಿಲ್,ನೀಲಕಂಠಪ್ಪ, ಕಮಲಮ್ಮ, ಮಂಜುನಾಥ ,ಮಹದೇವ, ನಾಯಕ,ಪ್ರದೀಪ್ ಇದ್ದರು.