ಸುದ್ದಿಮೂಲ ವಾರ್ತೆ
ತಿರುವನಂತಪುರ, ಅ.29: ಕೇರಳದ ಕೊಚ್ಚಿಯಲ್ಲಿ ಕ್ರಿಶ್ಚಿಯನ್ ಧಾರ್ಮಿಕ ಕೂಟದಲ್ಲಿ ಭಾನುವಾರ ತ್ರಿವಳಿ ಸರಣಿ ಸ್ಫೋಟ ಸಂಭವಿಸಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದರೆ, 45ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಕೇರಳದ ಕೊಚ್ಚಿಯ ಕಲಮಸ್ಸೇರಿ ಧಾರ್ಮಿಕ ಸಮಾವೇಶದ ಸಂದರ್ಭದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ತ್ರಿವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಜಿಲ್ಲೆಯಲ್ಲಿ ಓರ್ವ ಶಂಕಿತ 44 ವರ್ಷದ ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಶರಣಾಗಿದ್ದಾನೆ. ಸ್ಫೋಟಕ್ಕೆ ನಾನೇ ಕಾರಣ ಎಂದು ಅದಕ್ಕೆ ಪೂರಕವಾದ ದಾಖಲೆಗಳ ಸಮೇತ ಪೊಲೀಸರ ಮುಂದೆ ತಾನೇ ಬಂದು ತಪ್ಪೊಪ್ಪಿಕೊಂಡಿದ್ದಾನೆ.
ಕೊಚ್ಚಿಯ ಕಲಮಸ್ಸೇರಿ ಕನ್ವೆನ್ಷನ್ ಸೆಂಟರ್ನಲ್ಲಿ ಭಾನುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ಪ್ರಾರ್ಥನೆಯಲ್ಲಿ 2000ಕ್ಕೂ ಹೆಚ್ಚಿನ ಜನ ಪಾಲ್ಗೊಂಡಿದ್ದರು. ಬೆಳಗ್ಗೆ 9ರ ಸುಮಾರಿಗೆ ಒಂದರ ಹಿಂದೆ ಒಂದೊರಂತೆ ಮೂರು ಸರಣಿ ಸ್ಫೋಟಗಳು ಸಂಭವಿಸಿತು. ಊಟದ ಡಬ್ಬಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಕೃತ್ಯ ಎಸಗಲಾಗಿದೆ.
ಪ್ರಾರ್ಥನಾ ಸಭೆಯ ಮಧ್ಯಭಾಗದಲ್ಲಿ ಇದ್ದಕ್ಕಿದ್ದಂತೆ ಮೊದಲ ಸ್ಫೋಟ ಸಂಭವಿಸಿತು. ಇದರಿಂದ ಬೆಚ್ಚಿಬಿದ್ದ ಜನರು ದಿಕ್ಕಪಾಲಾಗಿ ಓಡತೊಡಗಿದರು. ಘಟನೆಯಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರೆ, ಆ ಕ್ಷಣಕ್ಕೆ ಸುಮಾರು 20 ಮಂದಿ ಗಾಯಗೊಂಡಿದ್ದರು. ಬಳಿಕ ಗಾಯಾಳುಗಳ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಈ ಪೈಕಿ 18 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಮತ್ತು ಬಾಂಬ್ ನಿಷ್ಕ್ರಿಯ ತಂಡ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಲೈವ್ ಬಂದು ತಪ್ಪೊಪ್ಪಿಗೆ:
ಸ್ಫೋಟದ ನಂತರ ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಲೈವ್ಗೆ ಬಂದ ಡೊಮಿನಿಕ್ ಮಾರ್ಟಿನ್ ಸ್ಫೋಟದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ತ್ರಿಶೂರ್ ಜಿಲ್ಲೆಯ ಕೊಡಕರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕೊಚ್ಚು ಪೊಲೀಸ್ ಕ್ಯಾಂಪ್ನಲ್ಲಿ ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಶಂಕಿತ, ಡೊಮಿನಿಕ್ ಮಾರ್ಟಿನ್, ಪ್ರಾರ್ಥನಾ ಸಭೆಯನ್ನು ಆಯೋಜಿಸಿದ ಅದೇ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವನು ಎಂದು ಹೇಳಿಕೊಂಡಿದ್ದಾನೆ. ಆದರೆ, ಬಾಂಬ್ ಇಟ್ಟಿರುವುದಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟನವಾಗಿಲ್ಲ.
ಘಟನೆ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದೆ. ಮತ್ತೊಂದೆಡೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಭದ್ರತಾ ವಿಷಯದ ಕುರಿತು ಚರ್ಚಿಸಲು ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.