ಸುದ್ದಿಮೂಲ ವಾರ್ತೆ
ಹೊಸಕೋಟೆ.30: ಕೃಷಿ ಪದವಿ ಪಡಯುತ್ತಿರುವ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳು ಸುಮಾರು 3 ತಿಂಗಳ ಕಾಲ ಗ್ರಾಮೀಣ ಭಾಗದ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಗ್ರಾಮವಾಸ್ತವ್ಯ ಮಾಡಿ ನೈಜ ಕೃಷಿಯ ಸಮಸ್ಯೆಗಳು ಹಾಗೂ ಪರಿಹಾರಗಳನ್ನು ಕಂಡುಕೊಳ್ಳಲಿದ್ದಾರೆ ಎಂದು ಗಾಂಧಿ ಕೃಷಿ ವಿಜ್ಞಾನಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಹೆಚ್.ಕೆ.ಪಂಕಜಾ ಹೇಳಿದರು.
ಹೊಸಕೋಟೆ ತಾಲೂಕಿನ ಕಂಬಳೀಪುರ ಗ್ರಾಮಪಂಚಾಯತ್ ವ್ಯಾಪ್ತಿಯ ದೊಡ್ಡಕೋಲಿಗ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಕೃಷಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ 90 ದಿನಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತಿಮ ವರ್ಷದ ಬಿಎಸ್ಸಿ ಕೃಷಿ ಬಿಎಸ್ಸಿ ಕೃಷಿ ವ್ಯವಹಾರ ನಿರ್ವಹಣೆ ಹಾಗೂ ಬಿಟೆಕ್ ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ರೆಡಿ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ನಿರ್ವಹಣೆ, ಗ್ರಾಮದ ರೈತಾಪಿ ಕುಟುಂಬಗಳ ಸಮೀಕ್ಷೆ ಹಾಗೂ ಬೆಳೆಗಳ ಸಮೀಕ್ಷೆ ಮತ್ತು ಬೆಳಗಳ ರೋಗ ರುಜಿನಗಳ ಮಾಹಿತಿ ಹಾಗೂ ಪರಿಹಾರ ವಿದ್ಯಾರ್ಥಿಗಳಿಂದ ನೆಡೆಯುತ್ತಿದೆ ಎಂದರು.
ಸೂಲಿಬೆಲೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕ ಬಿ.ತಮ್ಮೇಗೌಡ ಮಾತನಾಡಿ ಅತಿ ಚಿಕ್ಕದೇಶವಾದ ಇಸ್ರೇಲ್ ನಲ್ಲಿ ನವೀನ ಕೃಷಿ ಪದ್ದತಿಗಳನ್ನು ಅಳವಡಿಸಿದ್ದು ಹನಿನೀರಾವರಿ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ದೇಶವಾಗಿದೆ, ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಾರೆ ಎಂದು ಹೇಳಿದರು.
ಕೃಷಿಕರಿಂದ ನಾವುಗಳು ಅನುಭವ ಪಡೆದುಕೊಂಡು ನಮ್ಮ ಜ್ಞಾನದಲ್ಲಿರುವ ಅನುಭವವನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಒದಗಿ ಬಂದಿದೆ. ನೂತನ ತಳಿಗಳು, ವಿವಿಧ ಬೇಸಾಯ ಪದ್ದತಿಗಳು ಯಂತ್ರಗಳ ಬಳಕೆ, ಬೆಳೆಗಳಲ್ಲಿರುವ ರೋಗಗಳ ಕೀಟಗಳ ಮಾದರಿಯನ್ನು ತೋರಿಸಿ ಅದಕ್ಕೆ ಬಳಸುವ ಕೀಟನಾಶಕಗಳನ್ನು ತಿಳಿಸಿಕೊಡುತ್ತೇವೆ ಎಂದು ಅಂತಿಮ ವರ್ಷದ ಬಿಎಸ್ಸಿ,ವಿದ್ಯಾರ್ಥಿ ತಿಪ್ಪೇಸ್ವಾಮಿ ಹೇಳಿದರು.
ಪಠ್ಯದ ಅನುಭವವನ್ನು ರೈತರೊಂದಿಗೆ ಜೊತೆಗೂಡಿ ನೈಜ ಕೃಷಿ ಚಟುವಟಿಕೆಗಳನ್ನು ಅರಿವಿಗೆ ಬರುವಂತೆ ಅಧ್ಯಯನ ಮಾಡಲು 90 ದಿನಗಳ ಶಿಬಿರ ದೊಡ್ಡಕೋಲಿಗದಲ್ಲಿ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ರೈತಾಪಿವರ್ಗದೊಂದಿಗೆ ಬೆರೆಯುತ್ತಿದ್ದಾರೆ ಎಂದು ಕೃಷಿಕ ಶಿವಕುಮಾರ್ ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಮತ, ಮಾಜಿ ಅಧ್ಯಕ್ಷ ರಮೇಶ್, ಸದಸ್ಯ ಶಿವಕುಮಾರ್, ಮುಖಂಡ ಗೋಪಾಲಪ್ಪ, ಡೇರಿ ಅಧ್ಯಕ್ಷ ರಾಜಣ್ಣ, ರೈತ ಸಂಪರ್ಕ ಕೇಂದ್ರ ಚಿಕ್ಕಪ್ಪಯ್ಯಣ್ಣ, ಕೃಷಿ ವಿಸ್ತರಣಾ ವಿಭಾಗದ ಡಾ.ಎ.ವಿದ್ಯಾ, ತೋಟಗಾರಿಕೆ ವಿಭಾಗದ ಡಾ.ಅನಿತಾ,ಡೇರಿ ನಿರ್ದೇಶಕ ಮಂಜುನಾಥ್, ಮಧು,ರಾಮಮೂರ್ತಿ, ಮಲ್ಲೇಶ್, ಮಾರುತಿ ಇತರರು ಇದ್ದರು.