ಸುದ್ದಿಮೂಲ ವಾರ್ತೆ
ಬೆಂಗಳೂರು, ನ.2: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಆದ್ಯತೆ ಮೇರೆಗೆ ರಸ್ತೆಗುಂಡಿಗಳನ್ನು ಮುಚ್ಚಬೇಕು. ಅದರಂತೆ ಮೊದಲಿಗೆ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ನಂತರ ವಾರ್ಡ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಬೆಸ್ಕಾಂ ಹಾಗೂ ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳು ಪಾಲಿಕೆಯ ಅನುಮತಿಯಿಲ್ಲದೆ ರಸ್ತೆ ಕತ್ತರಿಸುವಂತಿಲ್ಲ. ಈ ಪೈಕಿ ಪಾಲಿಕೆಯ ಅನುಮತಿಯಿಲ್ಲದೆ ರಸ್ತೆ ಕತ್ತರಿಸಿದರೆ ಸಂಬಂಧಪಟ್ಟ ಇಲಾಖೆಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂಜಿನಿಯರಿಂಗ್ ವಿಭಾಗದಿಂದ ಟೆಂಡರ್ ಕರೆದಿರುವ ವಿವಿಧ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಆಯಾ ವಾರ್ಡ್ಗಳಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆಯೇ ಎಂಬುದನ್ನು ವಾರ್ಡ್ ಇಂಜಿನಿಯರ್ಗಳು ಹಾಗೂ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರು ಜಂಟಿ ತಪಾಸಣೆ ನಡೆಸಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುವುದು ಕಂಡುಬಂದರೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವಲಯ ಜಂಟಿ ಆಯುಕ್ತರು ಹಾಗೂ ಘನತ್ಯಾಜ್ಯ ವಿಭಾಗದ ಅಧೀಕ್ಷಕ ಅಭಿಯಂತರರ ನೇತೃತ್ವದಲ್ಲಿ ಪಾದಚಾರಿ ಮಾರ್ಗ ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಕಡೆ ಕೈಗೆತ್ತಿಕೊಳ್ಳಬೇಕಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇನ್ನು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಹಶೀಲ್ದಾರರಿಂದ ಒತ್ತುವರಿ ತೆರವಿಗಾಗಿ ಆರ್ಡರ್ ನೀಡುವ ಕಡೆ ಕೂಡಲೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ವಲಯ ಆಯುಕ್ತರಾದ ಇಬ್ರಾಹಿಂ ಮೊಮಿನ್, ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಲೋಕೇಶ್, ಮೆಟ್ರೋ, ಜಲಮಂಡಲಿ ಹಾಗೂ ಬೆಸ್ಕಾಂ ಸಿಬ್ಬಂದಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.