ಸುದ್ದಿಮೂಲ ವಾರ್ತೆ
ಚಿಂತಾಮಣಿ, ನ. 04 : ತಾಲೂಕಿನ ಕಸಬಾ ಹೋಬಳಿ ಮುನಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಆಲಂಬಗಿರಿ ಗ್ರಾಮದಲ್ಲಿರುವ ಪುರಾತನ ಕಾಲದ ಕಲ್ಯಾಣಿಯನ್ನು ಸಚಿವ ಎಂ.ಸಿ ಸುಧಾಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ, ತಾಲೂಕ ಆಡಳಿತ, ತಾಲೂಕು ಪಂಚಾಯಿತಿ, ಸ್ಥಳೀಯ ಅಧಿಕಾರಿಗಳು, ಗ್ರಾಮಸ್ಥರು, ಮುಖಂಡರು, ಒಟ್ಟಾಗಿ ಸೇರಿ ಕಲ್ಯಾಣಿಯನ್ನು ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಖುದ್ದಾಗಿ ಫೀಲ್ಡಿಗಿಳಿದು ಸ್ವಚ್ಛಗೊಳಿಸಿದರು.
ನಂತರ ಮಾತನಾಡಿದ ಸಚಿವ ಎಂ ಸಿ ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಮಾಡುವ ಸಲುವಾಗಿ ನ. 1ರಿಂದ ಅಧಿಕೃತವಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಿದರು.
ಮಳೆಯಿಲ್ಲದೆ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರ ಸ್ಥಿತಿಗೆ ಹೋಗಲಿದೆ. ಹಾಗಾಗಿ ಯಾವುದೇ ನದಿ ಮೂಲಗಳಿಲ್ಲದ ಈ ಭಾಗದಲ್ಲಿ ಪುರಾತನ ಕಲ್ಯಾಣಿಗಳು, ಕೆರೆ,ಕಾಲುವೆಗಳೇ ಪ್ರಮುಖ ಜಲ ಮೂಲಗಳಾಗಿದ್ದು, ಅಂತರ್ಜಲ ಹೆಚ್ಚಳ ಮಾಡುವ ಸಲುವಾಗಿ ಜಲ ಮೂಲಗಳ ಪುನಶ್ಚೇತನ ಮಾಡಲಾಗುತ್ತಿದೆ ಕೆರೆ, ಕಲ್ಯಾಣಿಗಳ ಸಂರಕ್ಷ ಣೆ ಹಾಗೂ ಪುನಶ್ಚೇತನಗೊಳಿಸುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ.
ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೈಜೋಡಿಸಿ ಇವುಗಳ ರಕ್ಷ ಣೆಗೆ ಮುಂದಾಗಬೇಕು. ಈಗಾಗಲೇ ಅಧಿಕಾರಿಗಳಿಗೆ ನಗರಸಭೆ ವ್ಯಾಪ್ತಿಯಲ್ಲಿರುವ ಕಲ್ಯಾಣಿಗಳನ್ನು ಗುರುತಿಸಿ ಪುನಶ್ಚೇತನಗೊಳಿಸಲು ಸೂಚಿಸಲಾಗಿದೆ.ಈ ಕಾರ್ಯಕ್ಕೆ ನಾಗರಿಕರೂ ಸ್ವಯಂ ಪ್ರೇರಿತರಾಗಿ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದರೆ ಇತಿಹಾಸದಲ್ಲಿ ನಿರ್ಮಾಣವಾದ ಕಲ್ಯಾಣಿಗಳನ್ನು ರಕ್ಷಿಸುವ ಮೂಲಕ ಅಂತರ್ಜಲದ ಮಟ್ಟವನ್ನು ವೃದ್ಧಿಸಬಹುದಾಗಿದೆ ಎಂದು ಹೇಳಿದರು.
ಝೀಕಾ ವೈರಸ್ ಬಗ್ಗೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಚಿವ ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. , ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಎಲ್ಲಾ ರೀತಿಯ ಮಾತುಕತೆಗಳು ನಡೆದಿವೆ. ಝೀಕಾ ವೈರಸ್ ಕಂಡುಬಂದಿರುವ ಸ್ಥಳಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಪ್ರತಿಯೊಬ್ಬರು ಸ್ವಚ್ಛತೆಯನ್ನು ಕಾಪಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರವೀಂದ್ರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ ನಿಟ್ಟಾಲಿ,ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ್,ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿಯಾದ ಈಶ್ವರಪ್ಪ, ತಾಲ್ಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್,ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರುಗಳಾದ ರಾಘವೇಂದ್ರ, ನವೀನ್ ಕುಮಾರ್ ಭಾಗವಹಿಸಿದ್ದರು.