ಸುದ್ದಿಮೂಲ ವಾರ್ತೆ
ಮೈಸೂರು,ನ.5: ಹಲವಾರು ವರ್ಷಗಳಿಂದ ಕಾಡಂಚಿನ ಗ್ರಾಮಗಳ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡಿ, ಸಿಕ್ಕ ರೈತರ ಮೇಲೆ ದಾಳಿ ಮಾಡುತ್ತಾ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವನ್ಯಜೀವಿ ವಲಯದ ಜಾರ್ಗಲ್ ಸಮೀಪ ಸರೆ ಹಿಡಿಯಲಾಗಿದೆ.
ಮಂಟಳ್ಳಿ ಶಾಖೆಯ ಸೊಳ್ಳೇಪುರ ಗ್ರಾಮ ಸಮೀಪದ ಕಾಡಂಚಿನ ಜಮೀನುಗಳಲ್ಲಿ ಬೆಳೆಹಾನಿ ಮಾಡುತ್ತಿದ್ದ ಒಂಟಿ ಸಲಗವನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಸಪ್ತ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ರವಾನಿಸಲಾಗಿದೆ.
ಗಡಿಭಾಗದ ರೈಲ್ವೆ ಬ್ಯಾರಿಕೇಡ್ ಹಾಗೂ ಸ್ಟೀಲ್ ರೋಫ್ ಬ್ಯಾರಿಕೇಡ್ ಅನ್ನೇ ಮುರಿದು ಹೊರಬಂದು ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಬೆಳೆ ನಾಶಪಡಿಸುತ್ತಿತ್ತು. ಇದು ಜನರಲ್ಲಿ ಭೀತಿ ಸೃಷ್ಟಿಸಿತ್ತು. ಈ ಆನೆ ಉಪಟಳದ ಬಗ್ಗೆ ಹಲವು ವರ್ಷಗಳಿಂದಲೂ ಕಾಡಂಚಿನ ರೈತರು ದೂರು ನೀಡುತ್ತಲೇ ಇದ್ದರು. ಆನೆ ಹೊರ ಬಂದಾಗ ಕಾಡಿಗಟ್ಟುವ ಕೆಲಸವಾಗುತ್ತಿತ್ತು,ಮತ್ತೆ ಹೊರಬಂದು ದಾಳಿ ಮಾಡುತ್ತಿತ್ತು.
ಬೀಟ್ ಅರಣ್ಯ ಪ್ರದೇಶದಲ್ಲಿ ಅಡ್ಡಾಡುತ್ತಾ, ರೋಪ್ ಬ್ಯಾರಿಕೇಡ್ನಿಂದ ಹೊರದಾಟುವ ವೇಳೆಯೇ ಅರವಳಿಕೆ ಚುಚ್ಚು ಮದ್ದು ನೀಡಿ ಈ ಕಾಡಾನೆಯನ್ನು ಸೆರೆ ಹಿಡಿಯಲಾಯಿತು. ಈ ಭಾಗದಲ್ಲಿ ಮತ್ತೆರಡು ಪುಂಡಾನೆಗಳಿದ್ದು, ಅವನ್ನು ಸಹ ಸೆರೆ ಹಿಡಿಯಲಾಗುವುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೆಡೆಮುರಿ ಕಟ್ಟಿದ ಕ್ಯಾಪ್ಟನ್ ಅಭಿಮನ್ಯು
ಸೆರೆಯಾಗಿರುವ ಒಂಟಿ ಸಲಗ ಸುಮಾರು 35-40 ವರ್ಷ ವಯಸ್ಸಿನ ಬಲಿಷ್ಠ ಆನೆ. ಅರವಳಿಕೆ ಚುಚ್ಚುಮದ್ದಿನಿಂದ ಜ್ಞಾನ ತಪ್ಪಿದ್ದ ಪುಂಡಾನೆ ಎಚ್ಚರಗೊಂಡು ತನ್ನ ಪ್ರತಾಪ ತೋರಲು ಮುಂದಾಗುತ್ತಿದ್ದಂತೆ ಅಭಿಮನ್ಯು ನೇತೃತ್ವದ ಆನೆಗಳು ಕಾರ್ಯಾಚರಣೆ ನಡೆಸಿದವು. ಲಾರಿ ಹತ್ತಲು ನಿರಾಕರಿಸುತ್ತಿದ್ದ ಪುಂಡಾನೆಯನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಬಲಭೀಮ, ಮಹೇಂದ್ರ, ಮಹಾರಾಷ್ಟ್ರ ಭೀಮ್, ಅಶ್ವತ್ಥಾಮ, ಹರ್ಷ ಸಾಕಾನೆಗಳು ಎಳೆದು ತಂದು ಲಾರಿ ಹತ್ತಿಸಿದವು.ನಾಗರಹೊಳೆ ಉದ್ಯಾನದ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಎಸಿಎಫ್ ದಯಾನಂದ್, ವೀರನಹೊಸಹಳ್ಳಿ ಆರ್ ಎಫ್ಓ ಅಭಿಷೇಕ್.ಪಿ.ಎಸ್, ನಾಗರಹೊಳೆ ಪಶುವೈದ್ಯಾಧಿಕಾರಿ ಡಾ.ರಮೇಶ್, ಡಿಆರ್ ಎಫ್ಓ ಚಂದ್ರೇಶ್, ದುಬಾರೆ ಸಾಕಾನೆ ಶಿಬಿರದ ಡಿಆರ್ಎಫ್ಓ ರಂಜನ್ ಸೇರಿದಂತೆ 70ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಿಡಿಲು ಬಡಿದು ಹಸುಗಳ ಸಾವು
ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರೈತ ಯೋಗೇಶ್ ಎಂಬವರಿಗೆ ಸೇರಿದ ಎರಡು ಹಸುಗಳು ಸೇರಿದ್ದವು