ಸುದ್ದಿಮೂಲ ವಾರ್ತೆ
ನೆಲಮಂಗಲ,ನ.6 : ಕೃಷಿ ಪಂಪ್ ಸೆಟ್ ಗಳಿಗೆ ನಿರಂತರ 10 ಗಂಟೆ ಸಮರ್ಪಕ ವಿದ್ಯುತ್ ಪೂರೈಸಬೇಕು, ರೈತರ ಸಾಲ ವಸೂಲಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ನ. 9ರಂದು ಮೈಸೂರಿನ ಮುಖ್ಯಮಂತ್ರಿ ಮನೆ ಮುಂದೆ ಹಮ್ಮಿಕೊಂಡಿರುವ ಬೃಹತ್ ಧರಣಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಬೆಂಬಲ ಸೂಚಿಸಿದ್ದಾರೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೆಲಮಂಗಲ ತಾಲ್ಲೂಕು ಅಧ್ಯಕ್ಷ ರಾಜೇಶ್ ಮಾತನಾಡಿ,
ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಣ್ಣುಮುಚ್ಚಾಲೆ ಆಟದಂತಾಗಿದೆ. ಬರಗಾಲದಿಂದ ನರಳುತ್ತಿರುವ ರೈತರಿಗೆ ವಿದ್ಯುತ್ ಮತ್ತೊಂದು ಮರ್ಮಘಾತ ನೀಡಿದೆ. ಮಳೆ ಕಡಿಮೆ ವಿದ್ಯುತ್ ಉತ್ಪಾದನೆ ಕುಂಠಿತದ ಕಾರಣ ನೀಡಿ ರೈತರಿಗೆ ಕೇವಲ ಎರಡು ಮೂರು ಗಂಟೆ ವಿದ್ಯುತ್ ನೀಡುವ ಸರ್ಕಾರ ಕೈಗಾರಿಕೆಗಳಿಗೆ, ಉದ್ಯಮಿಗಳಿಗೆ ಸಮರ್ಪಕ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎನ್ನುತ್ತದೆ. ಇದು ಸರ್ಕಾರದ ಇಬ್ಬಗೆ ನೀತಿ ತೋರಿಸುತ್ತದೆ.
ಸರ್ಕಾರ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವುದು ಯಾವ ನ್ಯಾಯ?
ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ರೈತರಿಗೆ 10 ಗಂಟೆ ವಿದ್ಯುತ್ ಪೂರೈಕೆ ಮಾಡದಿದ್ದರೆ, ಸುಮಾರು 45 ಲಕ್ಷ ಕೃಷಿ ಪಂಪ್ ಸೆಟ್ ರೈತರು ಬೀದಿಪಾಲಾಗುತ್ತಾರೆ.
ಈಗಾಗಲೇ ರಾಜ್ಯದ 223 ತಾಲ್ಲೂಕು ಬರಗಾಲ ಘೋಷಣೆ ಮಾಡಿರುವ ಸರ್ಕಾರ, ಇನ್ನು ಬರಗಾಲ ಸಂಕಷ್ಟದ ನೆರವು ಕಾರ್ಯಾರಂಭ ಮಾಡಿಲ್ಲ. ದನಕರುಗಳಿಗೆ ಮೇವು, ಕುಡಿಯುವ ನೀರು, ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು.
ಬರಗಾಲದ ಹಿನ್ನೆಲೆ ಬ್ಯಾಂಕುಗಳು, ಸಹಕಾರ ಸಂಘಗಳು ರೈತರ ಸಾಲ ವಸೂಲಾತಿ ಮಾಡಬಾರದು ಎಂದು ಸರ್ಕಾರವೇ ಆದೇಶಿಸಿದ್ದರೂ, ಅದನ್ನು ಲೆಕ್ಕಿಸದೆ ಕೆಲವು ಬ್ಯಾಂಕ್ ಗಳು ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ.
ಈ ಎಲ್ಲದರ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ರೈತ ಸಂಘಟನೆಗಳ ಒಕ್ಕೂಟದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.