ಸುದ್ದಿಮೂಲ ವಾರ್ತೆ
ತುಮಕೂರು ನ.06: ತುಮಕೂರು ನಗರ ಮತ್ತು ಕುಣಿಗಲ್ ಪಟ್ಟಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತಿಯಾಗಿರುವ ಅರ್ಜಿಗಳನ್ನು ತಮ್ಮಲ್ಲಿ ಉಳಿಸಿಕೊಳ್ಳದೆ ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಎಲ್ಲಾ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಆಶ್ರಯ ಯೋಜನೆಯಡಿಯಲ್ಲಿ ನಿವೇಶನಗಳನ್ನು ನೀಡಲು ಗುರುತಿಸಲಾಗಿರುವ ಭೂಮಿಯನ್ನು ಲೇಔಟ್ ಆಗಿ ಅಭಿವೃದ್ಧಿಪಡಿಸಲು ಕಾರ್ಯ ನಿರ್ವಹಣಾಧಿಕಾರಿಗಳು ನಗರ ಯೋಜನಾ ವಿಭಾಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಅನುಮತಿಯನ್ನು ಪಡೆಯಬೇಕು ಎಂದು ಹೇಳಿದರು.
ತಹಶೀಲ್ದಾರ್ ಹಂತದಲ್ಲಿರುವ 90ದಿನಗಳ ಒಳಗಿರುವ ಕೋರ್ಟ್ ಪೆಂಡೆನ್ಸಿ ಪ್ರಕರಣ, ನಮೂನೆ 53 ಮತ್ತು 57ರಲ್ಲಿ ಸ್ವಿಕೃತವಾಗಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ನಮೂನೆ 53 ಮತ್ತು 57 ಕ್ಕೆ ಸಂಬಂಧಿಸಿದಂತೆ ಕಮಿಟಿ ರಚನೆ ಕುರಿತಂತೆ ಎಲ್ಲಾ ತಹಶೀಲ್ದಾರರು ಮಾಹಿತಿಯನ್ನು ನಾಳೆ ಸಂಜೆಯೊಳಗೆ ಕೊಡಬೇಕು ಎಂದು ಹೇಳಿದರು.
ಎಲ್ಲಾ ತಹಶೀಲ್ದಾರರು ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಈ- ಆಫೀಸ್ ತಂತ್ರಾಂಶದ ಮೂಲಕವೇ ಕಡತಗಳನ್ನು ಸ್ವೀಕೃತಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಯಾವುದೇ ಕಡತಗಳನ್ನು ಭೌತಿಕವಾಗಿ ವಿಲೇವಾರಿ ಮಾಡಬಾರದು ಎಂದು ಹೇಳಿದರು.
ಜಿಲ್ಲೆಯಲ್ಲಿ ಮೂರು ತಿಂಗಳ ಒಳಗೆ ಹೊಸದಾಗಿ ಸೇರ್ಪಡೆಯಾಗಿರುವ ಯುವ ಮತದಾರರ ಮಾಹಿತಿಯನ್ನು ವಿಧಾನಸಭಾ ಕ್ಷೇತ್ರವಾರು ಎಲ್ಲಾ ತಹಶೀಲ್ದಾರ್ ಅವರು ನೀಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಯುವ ಮತದಾರರನ್ನು ಮತಪಟ್ಟಿಗೆ ನೋಂದಾಯಿಸಲು ನ.18 ಮತ್ತು 19ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿ ಗೌರವ್ಕುಮಾರ್ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್ ಉಪಸ್ಥಿತರಿದ್ದರು.