ಬೆಂಗಳೂರು,ನ.7; ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಸ್. ಪ್ರತಿಮಾ ಹತ್ಯೆ ಪ್ರಕರಣದಲ್ಲಿ ಕಲ್ಲು ಗಣಿಗಾರಿಕೆ ಉದ್ಯಮದವರ ಕೈವಾಡವಿದೆ ಎಂಬ ಆಧಾರ ರಹಿತ ಆರೋಪಗಳಿಂದ ಕಲ್ಲು ಗಣಿಗಾರಿಕೆ ಉದ್ಯಮದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳ, ಕಲ್ಲು ಗಣಿಗಾರಿಕೆ ಉದ್ಯಮ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಅತ್ಯುತ್ತಮ ಸಂಬಂಧವಿದೆ. ನಮ್ಮಲ್ಲಿ ಹೆಗೆತನವಿಲ್ಲ. ನಮ್ಮಲ್ಲಿ ಶೇ 10 ರಷ್ಟು ಅಕ್ರಮ ಗಣಿಗಾರಿಕೆ ನಡೆಸುವವರು ಇರಬಹುದು. ಯಾರೇ ಅಕ್ರಮ ಮಾಡಿದರೂ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇತಿಹಾಸದಲ್ಲಿ ಹಿಂದೆಂದೂ ಇಂತಹ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದರು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು. ಭವಿಷ್ಯದಲ್ಲಿ ಇಂತಹ ದುರ್ಘಟನೆ ಮರುಕಳಿಸಬಾರದು. ಸರ್ಕಾರದ ನಿಯಮಗಳ ಅನುಸಾರ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ.
ಕೆ.ಎಸ್.ಪ್ರತಿಮಾ ಅವರು ನೇರ ನಿಷ್ಠುರ ಅಧಿಕಾರಿ. ಅವರ ಕೊಲೆ ಆರೋಪಿಗಳು ಪತ್ತೆಯಾಗಿದ್ದು, ಈ ಮೂಲಕ ಕಲ್ಲು ಗಣಿಗಾರಿಕೆ ಉದ್ಯಮದರ ಮೇಲಿನ ಕಳಂಕ ನಿವಾರಣೆಯಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮತ್ತು ಗಣಿಗಾರಿಕೆ ಸಚಿವರು ಸೂಕ್ತ ನಿರ್ದೇಶನ ನೀಡಬೇಕು. ಹತ್ಯೆಯಾದ ಅಧಿಕಾರಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಡಾ. ರವೀಂದ್ರ ಶೆಟ್ಟಿ ಬಜಗೋಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಿರಣ್ ರಾಜ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮತ್ತು ಸಂಘಟನಾ ಕಾರ್ಯದರ್ಶಿ ನಾರಾಯಣ ಬಾಬು ಉಪಸ್ಥಿತರಿದ್ದರು.