ಸುದ್ದಿಮೂಲ ವಾರ್ತೆ
ಕೆ.ಆರ್.ಪುರ. ನ.7;ಧಾರಾಕಾರ ಮಳೆಗೆ ಬೆಳ್ಳಂದೂರು, ವರ್ತೂರು, ಮಾರತ್ತಹಳ್ಳಿ. ವೈಟ್ಫೀಲ್ಡ್ ಭಾಗದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು.
ಕರಿಯಮ್ಮ ಅಗ್ರಹಾರದ ಬಳಿ ರಸ್ತೆಯು ಪುನಃ ಜಲಾವೃತ್ತವಾಗಿದ್ದು ವಾಹನ ಸವಾರರು ಹೈರಾಣರಾದರು. ರಾಜ ಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಬಿಬಿಎಂಪಿ ಸಿಬ್ಬಂದಿ ವ್ಯವಸ್ಥೆ ಮಾಡಿದರು.
ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟರು. ಪಣತ್ತೂರು ಬಳಗೆರೆ ರಸ್ತೆಯಲ್ಲಿ ಗುಂಡಿಗಳು ಬಿದ್ದು ಮಳೆ ನೀರು ಆವರಿಸಿದ್ದರಿಂದ ವಾಹನಗಳು ಸಾಲುಸಾಲಾಗಿ ನಿಂತಿದ್ದವು.
ಕಳೆದ ರಾತ್ರಿ ಸುರಿದ ಮಳೆಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಯಾವುದೇ ತೊಂದರೆ ಅಗಬಾರದೆಂದು ಇಡೀ ರಾತ್ರಿ ಬಿಬಿಎಂಪಿ, ಜಲಮಂಡಳಿ ಹಾಗೂ ರಾಜಕಾಲುವೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಚರಣೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಪ್ರತಿ ಸಾರಿ ಮಳೆ ಬಂದಾಗಲೂ ಸಮಸ್ಯೆ ಎದುರಿಸುವಂತಾಗಿದೆ. ಮಳೆಯಿಂದಾಗಿ ಸಂಚಾರ ದಟ್ಟಣೆ ಹೇಳತೀರದಾಗಿದೆ. ಕೆಲವು ಕಡೆ ರಾಜ ಕಾಲುವೆಯಲ್ಲಿ ಹುಳು ತುಂಬಿಕೊಂಡು ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತವೆ. ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಕರಿಯಮ್ಮನ ಅಗ್ರಹಾರದ ನಿವಾಸಿ ಆಳಲು ತೊಡಗಿಕೊಂಡರು.