ಸುದ್ದಿಮೂಲ ವಾರ್ತೆ
ನೆಲಮಂಗಲ,ನ.7 : ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆ ವೃತ್ತದ ಕೆಇಬಿ ಮುಂಭಾಗದಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಂತು ವಾಹನ ಚಾಲನೆಗೆ ತೊಂದರೆ ಉಂಟಾಗಿದೆ.
ಎರಡು ದಿನಗಳಿಂದ ಬರುತ್ತಿರುವ ಮಳೆಯಿಂದ ನೀರು ರಸ್ತೆಯಲ್ಲಿ ನಿಂತಿದೆ. ಸಾರ್ವಜನಿಕರು ವಾಹನಗಳಲ್ಲಿ ಓಡಾಡಲು ಅಡಚಣೆ ಉಂಟು ಮಾಡಿದೆ. ಹಲವು ವರ್ಷಗಳಿಂದ ಇದೇ ರಸ್ತೆಯಲ್ಲಿ ಮೊಳಕಾಲುದ್ದದ ನೀರು ನಿಂತು ರಸ್ತೆ ಚಿಕ್ಕ ಕೆರೆಯಂತಾಗುತ್ತಿತ್ತು. ಮಳೆ ಬಂದರೆ ಈ ರಸ್ತೆಯಲ್ಲಿ ಆಕಡೆಯಿಂದ ಈ ಕಡೆಗೆ ಬರಲು ಆಗುತ್ತಿರಲಿಲ್ಲ.
ಈ ರಸ್ತೆ ಎತ್ತರಿಸಿ ನೀರು ನಿಲ್ಲದಂತೆ ಮಾಡಲು ಲೋಕೋಪಯೋಗಿ ಇಲಾಖೆಯಿಂದ 80 ಲಕ್ಷ ರೂಪಾಯಿ ಹಣ ಮಂಜೂರು ಆಗಿತ್ತು. ನೆಲಮಂಗಲ ಶಾಸಕ ಎನ್.ಶ್ರೀನಿವಾಸ ಅವರು ಇತ್ತೀಚೆಗೆ ಕಾಮಾಗಾರಿಗೆ ಚಾಲನೆ ನೀಡಿ ಪೂಜೆ ಮಾಡಿದ್ದರು. ತಾಲೂಕಿನ ದಾಬಸ್ ಪೇಟೆಯ ಶಿವಗಂಗೆ ರಸ್ತೆಯಲ್ಲಿ ಕೆಶಿಪ್ ನಿರ್ಮಾಣ ಮಾಡಲಾಗಿತ್ತು. ಆದರೆ ಮಳೆ ಬಂದರೆ ಅಲ್ಲಿ ಮಿನಿಕೆರೆಯಾಗಿತ್ತು ಆದರೆ ಸಾರ್ವಜನಿಕರು ಮನವಿ ಸಲ್ಲಿಸಿ ಸುಮಾರು ಲೋಕೋಪಯೋಗಿ ಇಲಾಖೆಯಿಂದ ಸುಮಾರು 80 ಲಕ್ಷ ಅನುದಾನ ಆದೇಶವಾಗಿತ್ತು. ಅಲ್ಲಿ ನೀರು ಹೋಗಲು ಸಣ್ಣದಾಗಿ ಮೋರಿ ನಿರ್ಮಾಣ ತದನಂತರ ಅಲ್ಲಿ ಸುಮಾರು 300 ರಿಂದ 400 ಮೀಟರ್ ಡಾಂಬರ್ ಹಾಕುವುದು ಎಂದಾಗಿತ್ತು. ಸುಮಾರು 6 ರಿಂದ 7 ತಿಂಗಳಾದರೂ ರಸ್ತೆಗೆ ಇನ್ನೂ ರಿಪೇರಿ ಭಾಗ್ಯ ಕೂಡಿಬಂದಿಲ್ಲ.
ರಸ್ತೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಿ, ಸಿಮೆಂಟ್ ರಸ್ತೆ ಕೊನೆಗೊಳ್ಳುವ ಎರಡು ಬದಿಯಲ್ಲಿ ಡಾಂಬರು ಹಾಕಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ನಟರಾಜು ತಿಳಿಸಿದ್ದಾರೆ.