ಸುದ್ದಿಮೂಲ ವಾರ್ತೆ
ಬೆಂಗಳೂರು, ನ.9: ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ ಹಾಗೂ ಗದ್ದುಗೆ ಶಿಲಾಮಂಟಪ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭೋವಿ ಜನಜಾಗೃತಿ ರಥಯಾತ್ರೆ ಕೈಗೊಳ್ಳಲಾಗಿದ್ದು, ಈ ಮೂಲಕ ಸಮಾಜವನ್ನು ಸಂಘಟಿಸಲು ಶ್ರಮಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗುರುವಾರ ಭೋವಿ ಜನಜಾಗೃತಿ ಡಿಜಿಟಲ್ ರಥ ಯಾತ್ರೆಗೆ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನವೆಂಬರ್ 23ರಂದು ಬಾಗಲಕೋಟೆಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಗುರುಕುಟೀರ ಉದ್ಘಾಟನೆ ನೇರವೇರಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದು, ಕಾರ್ಯಕ್ರಮದ ಮೂಲಕ ಭೋವಿ ಸಮಾಜವನ್ನು ಸಂಘಟಿಸಲಾಗುತ್ತದೆ ಎಂದು ತಿಳಿಸಿದರು.
ಶರಣಬಸವ ಶ್ರೀಗಳು ಸಮುದಾಯವನ್ನು ಮೌಢ್ಯತೆಯಿಂದ ವೈಚಾರಿಕತೆಯ ಪಥಕ್ಕೆ ತಂದವರು, ಮುಗ್ಧರನ್ನು ಪ್ರಬುದ್ಧರನ್ನಾಗಿಸಿದವರು. ಕಂದಾಚಾರ ಪರಂಪರೆಯಿಂದ ಶರಣ ಪರಂಪರೆಗೆ ಮತ್ತೊಮ್ಮೆ ಸೆಳೆದವರು. ಶ್ರಮಿಕ ವರ್ಗವನ್ನು ಅಕ್ಷರದ ವಾರಸುದಾರರನ್ನಾಗಿಸಿದ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ, ಗದ್ಗುಗೆ ಶಿಲಾಮಂಟಪ ಶಿಲಾನ್ಯಾಸ ನೇರವೇರಿಸಲಾಗುತ್ತದೆ ಎಂದು ಹೇಳಿದರು.
ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಸಮಾಜ ಸೇವಾ ದೀಕ್ಷೆ ತೊಟ್ಟು, ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಪೀಠಾಧ್ಯಕ್ಷರಾಗಿ 25 ವರ್ಷಗಳು ಸಂದಿವೆ. ಭೋವಿ ಸಮುದಾಯದ ಉನ್ನತಿಗಾಗಿ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲೆಮಾರಿ, ಶ್ರಮಿಕ ಸ್ವಭಾವದ ಭೋವಿ ಸಮುದಾಯದಲ್ಲಿ ಧಾರ್ಮಿಕ ಸಂಸ್ಕಾರ, ಶಿಕ್ಷಣದ ಬಗ್ಗೆ ಜಾಗೃತಿ ಹಾಗೂ ಒಗ್ಗಟ್ಟಿನ ಮಂತ್ರ ಹೇಳಿಕೊಡುವ ಮೂಲಕ ಸಮುದಾಯವನ್ನು ಎಚ್ಚರದಲ್ಲಿಟ್ಟಿದ್ದಾರೆ. ಧಾರ್ಮಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ರಾಜಕೀಯವಾಗಿ ಸುಧಾರಣೆಗೊಳ್ಳುವಲ್ಲಿ ಶ್ರೀಗಳ ಪಾತ್ರ ಅನ್ಯನ್ನವಾದುದ್ದು. ಶ್ರೀಗಳ ಪ್ರಯತ್ನದಿಂದ ಕೋಟ್ಯಾಂತರ ವೆಚ್ಚದ ಗುರು ಕುಟೀರ ನಿರ್ಮಾಣಗೊಂಡಿದೆ. ಭೋವಿ ಜಗದ್ಗುರುಗಳ ದಿವ್ಯಸಾನಿಧ್ಯದಲ್ಲಿ ಸಮಾರಂಭ ಜರುಗಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಸಿಸಿಐ ರಾಷ್ಟ್ರೀಯ ಅಧ್ಯಕ್ಷ ರವಿ ಹೆಚ್.ಮಾಕಳಿ, ಹಾವೇರಿ ರವಿ ಹೆಚ್.ಪೂಜಾರ್, ಶಿಗ್ಗಾವಿ ಅರ್ಜುನ ಹಂಚಿನಮನಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶಿವಶಂಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.