ಸುದ್ದಿಮೂಲ ವಾರ್ತೆ
ಬೆಂಗಳೂರು, ನ.10: ಬರ ಪೀಡಿತ ತಾಲ್ಲೂಕುಗಳಲ್ಲಿ ರೈತರಿಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡಲು ಅವರ ಜಮೀನಿನ ವಿವರವನ್ನು ‘ಫ್ರೂಟ್ಸ್’ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ಸೇರ್ಪಡೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅವರು ಇಂದು ವಿಕಾಸಸೌಧದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗಿನ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬರ ಪರಿಹಾರ ನೀಡುವ ಉದ್ದೇಶದಿಂದ ಈಗಾಗಲೇ ಕೇಂದ್ರಕ್ಕೆ ನೆರವು ಕೇಳಲಾಗಿದೆ. ರಾಜ್ಯದ ಸಚಿವರ ತಂಡ ಕೇಂದ್ರ ಸರ್ಕಾರದ ಕೃಷಿ ಸಚಿವರನ್ನು ಭೇಟಿ ಮಾಡುವ ಉದ್ದೇಶದಿಂದ ತೆರಳಿದ್ದರೂ ಅವರು ನಮಗೆ ಸಮಯ ನೀಡಲಿಲ್ಲ. ಹೀಗಾಗಿ ಕೇಂದ್ರ ಕೃಷಿ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದೇವೆ. ಕೇಂದ್ರ ಕೃಷಿ ಸಚಿವರು ದೆಹಲಿ ಅಥವಾ ಬೇರೆ ಎಲ್ಲಿಯೇ ಸಮಯಾವಕಾಶ ನೀಡಿದರೂ ನಾವು ಬರಲು ಸಿದ್ಧ ಎಂದು ಪತ್ರವನ್ನೂ ಬರೆದಿದ್ದೇವೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಂದ ತಕ್ಷಣ ರಾಜ್ಯದ ರೈತರಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಹಿಂದೆ ಬರ ಪರಿಹಾರ ನೀಡುವಾಗ ಅನೇಕ ಲೋಪಗಳಾಗುತ್ತಿದ್ದವು. ಅರ್ಹರಿಗೆ ಸಿಗದೇ ಸೋರಿಕೆಯಾಗುತ್ತಿತ್ತು. ಕೆಳಹಂತದ ಅಧಿಕಾರಿಗಳು ತಮ್ಮ ಖಾತೆ, ತಮ್ಮ ಸಂಬಂಧಿಗಳ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವುದೂ ನಡೆದಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಬಾರಿ ಲಿಖಿತ ನೋಂದಣಿ ಮೂಲಕ ಪರಿಹಾರ ವಿತರಿಸದೆ, ಆನ್ಲೈನ್ ಮೂಲಕ ನೇರವಾಗಿ ರೈತರ ಖಾತೆಗೆ ಪಾವತಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
‘ಫ್ರೂಟ್ಸ್’ ತಂತ್ರಾಂಶದಲ್ಲಿ ಈಗಾಗಲೇ ಅನೇಕ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ತಮ್ಮ ಬಳಿ ಐದು ಎಕರೆ ಇದ್ದರೆ ಎರಡು ಎಕರೆ ಎಂದು ನೋಂದಾಯಿಸಿಕೊಂಡಿರುತ್ತಾರೆ ಅಥವಾ ಎರಡು ಸರ್ವೆ ಸಂಖ್ಯೆಗಳಲ್ಲಿ ಜಮೀನು ಇದ್ದರೆ ಒಂದೇ ಸರ್ವೆ ಸಂಖ್ಯೆ ನೋಂದಾಯಿಸಿರುತ್ತಾರೆ. ಈ ಬಾರಿ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯ ವಿರುವ ಮಾಹಿತಿ ಅನುಸಾರ ಬರ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಆದ್ದರಿಂದ ರೈತರು ನವೆಂಬರ್ ಅಂತ್ಯದೊಳಗೆ ತಮ್ಮ ಜಮೀನಿನ ಸಂಪೂರ್ಣ ವಿವರ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸೇರಿ ಅಗತ್ಯ ವಿವರಗಳನ್ನು ತಂತ್ರಾಂಶದಲ್ಲಿ ನೋಂದಾಯಿಸಬೇಕು ಎಂದು ಹೇಳಿದರು.
ಕೇಂದ್ರದಿಂದ ಬರ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ. ಹಣ ಬಂದ ಮೇಲೆ ರೈತರ ದಾಖಲೆಗಳನ್ನು ಕೇಳುವ ಬದಲು ಈಗಲೇ ಪೂರ್ವಸಿದ್ಧತೆ ಮಾಡಿಕೊಂಡು, ಹಣ ಬಂದ ತಕ್ಷಣವೇ ರೈತರಿಗೆ ಪರಿಹಾರ ಜಮೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಬೋರ್ವೆಲ್ ಬಾಡಿಗೆ:
ಬರದ ಕಾರಣ ಕುಡಿಯುವ ನೀರಿನ ಕೊರತೆ ಇರುವ ಪ್ರದೇಶಗಳನ್ನು ಮೊದಲೇ ಗುರುತಿಸಿ ಅಲ್ಲಿ ನೀರಿನ ಟ್ಯಾಂಕರ್ಗಳಿಗೆ ಟೆಂಡರ್ ಕರೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಈಗ ಹೊಸದಾಗಿ ಬೋರ್ವೆಲ್ ಕೊರೆಯುವ ಬದಲು ಈಗಾಗಲೇ ಅಲ್ಲಿ ಖಾಸಗಿ ಬೋರ್ವೆಲ್ಗಳು ಇದ್ದರೆ ಅವುಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಬಾಡಿಗೆ ಪಡೆಯಬೇಕು. ಎಲ್ಲಿ ನೀರಿನ ಸಮಸ್ಯೆ ಇದೆ ಎಂಬ ದೂರು ಬರುತ್ತದೋ 24 ಗಂಟೆಯೊಳಗೆ ಅಲ್ಲಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಅದೇ ರೀತಿ ಸದ್ಯ ಮೇವಿನ ಕೊರತೆ ಇಲ್ಲವಾದರೂ ಸಹ ಮುಂದಿನ ತಿಂಗಳು ಎದುರಾಗಬಹುದು. ಆದ್ದರಿಂದ ಅಗತ್ಯ ಇರುವ ಕಡೆ ಮೇವು ಖರೀದಿಸಿ ಗೋಶಾಲೆಗಳಲ್ಲಿ ದಾಸ್ತಾನು ಲಭ್ಯವಿಡುವಂತೆಯೂ ನಿರ್ದೇಶಿಸಲಾಗಿದೆ ಎಂದರು.