ಬೆಂಗಳೂರು,ನ.11:ದೀಪಾವಳಿ ಹಬ್ಬದ ಹಿನ್ನೆಲೆ ಸಾಲು-ಸಾಲು ರಜೆಗಳು ಇದ್ದು, ಇಂದು ಬೆಂಗಳೂರು ಮಂದಿ ತಮ್ಮ ಊರುಗಳ ಕಡೆ ಮುಖ ಮಾಡಿದ್ದಾರೆ.
ಹಬ್ಬದ ಹಿನ್ನೆಲೆ ಮೆಜೆಸ್ಟಿಕ್ಗೆ ಪ್ರಯಾಣಿಕರ ದಂಡೇ ಹರಿದು ಬಂದಿದೆ. ಸೀಟ್ ರಿಸರ್ವ್ ಮಾಡಿರುವವರು ಆರಾಮವಾಗಿ ನಿಂತಿದ್ದರೇ, ಸೀಟ್ ರಿಸರ್ವ್ ಮಾಡದವರು ಬಸ್ನಲ್ಲಿ ಸೀಟು ಹಿಡಿಯಲು ಮುಗಿಬಿದ್ದಿದ್ದಾರೆ.
ಇನ್ನು ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಇತರ ಜಿಲ್ಲೆಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ 2 ಸಾವಿರ ಹೆಚ್ಚುವರಿ ಬಸ್ ಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಕಲ್ಪಿಸಿದೆ. ಆದರೂ ಸಹ ಬಸ್ಗಳು ಫುಲ್ ರಶ್ ಆಗಿ ಸಂಚರಿಸುತ್ತಿವೆ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ KSRTC ಹೆಚ್ಚುವರಿ ಬಸ್ ಬಿಡುತ್ತಿದೆ.
ಕಳೆದ ರಾತ್ರಿಯಿಂದಲೇ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಜನರು ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸಲು ಆಗಮಿಸುತ್ತಿದ್ದು ಇಂದು ಸಹ ಬಳ್ಳಾರಿ, ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗ ಹಾಗೂ ಶಿವಮೊಗ್ಗಕ್ಕೆ ತೆರಳಲು ಜನರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ.