ಸುದ್ದಿಮೂಲ ವಾರ್ತೆ
ಮೈಸೂರು, ನ.11 : ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಉತ್ತಮ ಬೆಳವಣಿಗೆ- ಇದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಸುಲಭವಾಗುತ್ತದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಮಾಜಿ ಸಚಿವ ಜಿ.ಟಿ. ದೇವೇಗೌಡರು ವಿಶ್ಲೇಷಣೆ ಮಾಡಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರರಿಗೆ ಸಮುದಾಯದ ಬೆಂಬಲ ಇದೆ. ಯಡಿಯೂರಪ್ಪ ಸಿಎಂ ಆಗಲು ವಿಜಯೇಂದ್ರ ಚಾಣಾಕ್ಷತನವೂ ಇದೆ. ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡಲಾಗಿತ್ತು ಎಂಬ ಕಾರಣಕ್ಕೆ ಬಿಜೆಪಿಗೆ ಹಿನ್ನಡೆಯಾಗಿತ್ತು. ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿವಿಜಯೇಂದ್ರ ಆಯ್ಕೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಯಡಿಯೂರಪ್ಪ ಸಿಎಂ ಆದ ಮೇಲೆ ವೀರಶೈವ ಮಾತ್ರವಲ್ಲ, ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಒಟ್ಟಾಗಿ ಹೋಗಿದ್ದಾರೆ. ಯಡಿಯೂರಪ್ಪ ಮತ್ತು ಎಚ್.ಡಿ ಕುಮಾರಸ್ವಾಮಿ ಒಟ್ಟಾಗಿ ಹೋದ ಕಾರಣಕ್ಕಾಗಿಯೇ ಅಧಿಕಾರ ಸಿಕ್ಕಿದ್ದು, ಇಬ್ಬರೂ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಈಗ ಅದೇ ರೀತಿ ಬಿಎಸ್ವೈ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲಾಗಿದೆ. ಮತ್ತೊಂದು ಕಡೆ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದಾರೆ. ಇಬ್ಬರೂ ಒಟ್ಟಾಗಿ ಹೋದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂದು ಹೇಳಿದರು.
ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಅಂತ ಹೇಳುತ್ತಿದ್ದರು.ಆದರೆ ಹೈಕಮಾಂಡ್ ಸಿದ್ದರಾಮಯ್ಯಗೆ ಮಣೆ ಹಾಕಿತು. ಇದಾದ ಬಳಿಕ ಸಮಾಧಾನವಾಗಲಿಲ್ಲವೇ.ಬಿಜೆಪಿಯಲ್ಲೂ ಅದೇ ರೀತಿ ಅಸಮಾಧಾನ ಇದೆ.ಹೈಕಮಾಂಡ್ ಮುಂದೆ ಎಲ್ಲ ನಾಯಕರು ಸುಮ್ಮನಾಗುತ್ತಾರೆ.ವಿ ಸೋಮಣ್ಣನವರಿಗೆ ಅಸಮಾಧಾನ ಇದೆ.ಎಲ್ಲವನ್ನು ನಾಯಕರು ಮುಂದಿನ ಹಂತದಲ್ಲಿ ಸರಿಪಡಿಸುತ್ತಾರೆ. ಏನೇ ಇರಲಿ,ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ನಮ್ಮಗುರಿ.ನಾವು ಇಷ್ಟು ಸ್ಥಾನ ಬಿಟ್ಟುಕೊಡಿ ಎಂದು ಕೇಳುವುದಿಲ್ಲ.ಗೆಲ್ಲುವುದು ಒಂದೇ ಮಾನದಂಡ ಎಂದರು.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎರಡು ಕಡೆಯಿಂದಲೂ ಸರ್ವೇ ನಡೆಸಲಾಗುತ್ತದೆ.ಮೈಸೂರು ಲೋಕಸಭಾ ಕ್ಷೇತ್ರದ ವಿಚಾರದಲ್ಲೂ ಇದೇ ಮಾನದಂಡ ಅನುಸರಿಸಲಾಗುತ್ತದೆ. ಇಷ್ಟೇ ಕ್ಷೇತ್ರ ಬಿಟ್ಟುಕೊಡಿ ಅಂತ ನಾವು ಕೇಳಿಲ್ಲ. ಇನ್ನು ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿಯವರನ್ನೇ ಮಾಡಿ ಎಂದು ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಮುಂದೆ ಕುಮಾರಸ್ವಾಮಿಯವರು ಹೇಳಿ ಬಂದಿದ್ದಾರೆ ಎಂದು ತಿಳಿಸಿದರು.
ಲೋಕ ನಂತರ ಸರ್ಕಾರ ಪತನ :ಯಡಿಯೂರಪ್ಪ ಸಿಎಂ ಆಗಬೇಕು ಅಂತ 50 ಸಾವಿರ ಜನ ಸೇರಿಸಿದವನು ನಾನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಮಾಡಿಲ್ಲ.ಕೇವಲ ಗ್ಯಾರಂಟಿಗಳ ಹಿಂದೆ ಹೋಗ್ತಿದ್ದಾರೆ.ಇನ್ನು ಆರು ತಿಂಗಳು ಇದೇ ಸ್ಥಿತಿ ಎದುರಾದರೆ ಕಾಂಗ್ರೆಸ್ ಶಾಸಕರೇ ಸ್ವ ಕ್ಷೇತ್ರಕ್ಕೆ ತೆರಳಲು ಕಷ್ಟವಾಗುತ್ತದೆ.ಇದೆಲ್ಲವೂ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ.ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಿದರು
ಹಾಸನಾಂಬೆ ಎದುರು ಪ್ರತಿಜ್ಞೆ
ಹಾಸನಾಂಬೆ ಎದುರು ನಾವ್ಯಾರು ಆಣೆ ಮಾಡಿಲ್ಲ, ಪಕ್ಷ ಕಟ್ಟುವ ಕುರಿತು ಪ್ರತಿಜ್ಞೆ ಮಾಡಿದ್ದೇವೆ. ಜೆಡಿಎಸ್ ನಾಯಕರು ಯಾರು ಪಕ್ಷ ಬಿಡುವುದಿಲ್ಲ.ಲಕ್ಷಾಂತರ ಜನರು ಬರುವ ತಾಯಿ ಎದುರು ಆಣೆ – ಪ್ರಮಾಣ ಸಾಧ್ಯವಾ? ರಾಜ್ಯದಲ್ಲಿ ಪಕ್ಷ ಬಲವರ್ಧನೆ, ಕುಮಾರಸ್ವಾಮಿಯನ್ನು ಸಿಎಂ ಮಾಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.