ಸುದ್ದಿಮೂಲ ವಾರ್ತೆ
ಬೆಂಗಳೂರು, ನ.11: ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೆಳೆಯನಿಗೆ ಚಾಕು ಇರಿದು ನಾಟಕವಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾದೇಶ್ ಬಂಧಿತ ಆರೋಪಿ. ರಾಜಕುಮಾರ್ ಕೊಲೆಯಾದ ಸ್ನೇಹಿತ. ಇದೇ ತಿಂಗಳ 5ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಮಾದೇಶ ಮತ್ತು ಮೃತ ರಾಜ್ ಕುಮಾರ್ ಇಬ್ಬರೂ ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದರು. ನ.05ರಂದು ಎಣ್ಣೆ ಹೊಡೆಯಲೆಂದು ಮೀಟ್ ಆಗಿ ಅಂಗಡಿಯಲ್ಲಿ ಮದ್ಯ ಖರೀದಿಸಿ ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಇವರಿಬ್ಬರ ನಡುವೆ ಶುರುವಾದ ಜಗಳದಲ್ಲಿ ಮಾತಿಗೆ ಮಾತು ಬೆಳೆದಿತ್ತು. ಮಾದೇಶನ ಕುಟುಂಬ ಹಾಗೂ ಮಕ್ಕಳ ಬಗ್ಗೆ ರಾಜಕುಮಾರ್ ನಿಂದಿಸಿದ್ದ. ಈ ವೇಳೆ ಕೋಪಗೊಂಡ ಮಾದೇಶ ತನ್ನ ಕಾರ್ ನಲ್ಲಿದ್ದ ಚಾಕುವಿನಿಂದ ಎದೆ ಭಾಗಕ್ಕೆ ಇರಿದಿದ್ದ. ಚಾಕುವಿನಿಂದ ಚುಚ್ಚುತ್ತಿದ್ದಂತೆ ಗಾಬರಿಗೊಂಡು ತಾನೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೋಡ ಕೊಡಿಸಿದ್ದಾನೆ. ಬಳಿಕ ರಾಜ್ ಕುಮಾರ್ ಸಂಬಂಧಿಕರಿಗೆ ಕರೆ ಮಾಡಿ ಯಾರೋ ಅಪರಿಚಿತರು ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ. ಹೀಗೆ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದ್ದಾನೆ. ಕೊನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರಾಜ್ ಕುಮಾರ್ ಮೃತಪಟ್ಟಿದ್ದು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಾದೇಶ ಪರಾರಿಯಾಗಿದ್ದ. ಸದ್ಯ ಕೊಲೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ವೇಳೆ ಅಸಲಿ ಸಂಗತಿ ಬಯಲಾಗಿದೆ. ನಾಪತ್ತೆಯಾಗಿದ್ದ ಮಾದೇಶನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.