ಸುದ್ದಿಮೂಲ ವಾರ್ತೆ
ಮೈಸೂರು, ನ.13:ಮೈಸೂರು ನಗರ ಸೇರಿದಂತೆ ಜಿಲ್ಲಾದ್ಯಂತ ಪಟಾಕಿ ಖರೀದಿಗೆ ಜನರು ನೀರಸ ಪ್ರತಿಕ್ರಿಯೆ ತೋರಿಸಿದ್ದಾರೆ.
ಪರಿಸರ ಕಾಳಜಿಗೆ ಓಗೊಟ್ಟು ಪಟಾಕಿ ಖರೀದಿಸಲು ಜನರ ಹಿಂದೇಟು ಹಾಕಿದ್ದು,ಇದು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಪಟಾಕಿ ಅಂಗಡಿ ತೆರೆದಿರುವ ಮಾಲೀಕರಿಗೆ ನಿರಾಸೆ ಆಗಿದೆ. ಮೈಸೂರಿನ ಜೆ ಕೆ ಮೈದಾನ ಸೇರಿದಂತೆ ಹಲವೆಡೆ ದೀಪಾವಳಿ ವ್ಯಾಪಾರಕ್ಕಾಗಿ ತೆರೆದಿರುವ ತಾತ್ಕಾಲಿಕ ಪಟಾಕಿ ಮಳಿಗೆಗಳಿಗೆ ಜನರು ಎಂದಿನಂತೆ ಬರುತ್ತಿಲ್ಲ
ಗ್ರಾಹಕರಿಲ್ಲದೆ ಪಟಾಕಿ ವರ್ತಕರು ಕಂಗಾಲಾಗಿದ್ದಾರೆ.ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಮೈಸೂರು ನಗರದಲ್ಲಿ ಈ ಬಾರಿ ಅಷ್ಟಾಗಿ ಪಟಾಕಿಗಳು ಸದ್ದು ಮಾಡುತ್ತಿಲ್ಲ.ಈ ಬಾರಿ ಹಸಿರು ಪಟಾಕಿಗಳ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನುಳಿದ ಯಾವುದೇ ಪಟಾಕಿಗಳ ಮಾರಾಟಕ್ಕೆ ಅನುಮತಿ ನೀಡಿಲ್ಲ.
ಈ ಬಗ್ಗೆ ಮೈಸೂರು ಜಿಲ್ಲಾಡಳಿತದಿಂದ ಖಡಕ್ ಆದೇಶ ಹೊರಡಿಸಿದೆ. ಇದೇ ವೇಳೆ ಪರಿಸರ ಸ್ನೇಹಿ ಹಸಿರು ಪಟಾಕಿಗಳ ಖರೀದಿಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಪಟಾಕಿ ಸಿಡಿತದಿಂದಾಗುವ ಅನಾಹುತ, ಪರಿಸರ ಮಾಲಿನ್ಯಗಳ ಕುರಿತು ಹೆಚ್ಚಿದ ಜನಜಾಗೃತಿಯ ಎಫೆಕ್ಟ್ ಎಂದು ಹೇಳಲಾಗುತ್ತಿದೆ. ಮಂಗಳವಾರ ಬಲಿಪಾಡ್ಯಮಿ ಇರುವುದರಿದ ಪಟಾಕಿ ವ್ಯಾಪಾರ ಸುಧಾರಿಸುತ್ತದೆ ಎಂಬ ಆಶಾಭಾವನೆಯನ್ನು ವ್ಯಾಪಾರಸ್ಥರು ಹೊಂದಿದ್ದಾರೆ.