ಸುದ್ದಿಮೂಲ ವಾರ್ತೆ
ಬೆಂಗಳೂರು, ನ.15: ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಜಾತ್ಯತೀತ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ವಿವಿಧ ಪಕ್ಷದ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಇಬ್ಬರನ್ನೂ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ನಾವಿದ್ದಾಗ ಜನತಾದಳ ಸೆಕ್ಯುಲರ್ ಆಗಿತ್ತು. ಈಗ “ಎಸ್” ಕಿತ್ತೋಗಿ ಕೇವಲ ಜನತಾದಳ ಆಗಿ ಉಳಿದಿದೆ ಎಂದು ವ್ಯಂಗ್ಯವಾಡಿದರು.
ಹಿಂದೆಯೂ ಬಿಜೆಪಿ ಜತೆ ಕೈ ಜೋಡಿಸಿದ್ದ ಕಾರಣಕ್ಕೆ ಜನತಾ ಪರಿವಾರದಲ್ಲಿ ಸೆಕ್ಯುಲರ್ ಸಿದ್ದಾಂತದವರೆಲ್ಲಾ ಪ್ರತ್ಯೇಕವಾಗಿ ಉಳಿದೆವು. ಈಗ ಜೆಡಿಎಸ್ ಮತ್ತೆ ಬಿಜೆಪಿ ಜತೆ ಬೆರೆಯುತ್ತಿದೆ. ನಾನು ಈ ಜೆಡಿಎಸ್ ಅನ್ನು ಬಿಜೆಪಿಯ “ಬಿ” ಟೀಮ್ ಅಂದಿದ್ದಕ್ಕೆ ಸಿಟ್ಟಾಗಿದ್ದರು. ಅಂದು ನಾನು ಹೇಳಿದ್ದನ್ನು ಇಂದು ಅವರೇ ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬದ ಪಕ್ಷ ಆಗಿಯಷ್ಟೆ ಸೀಮಿತವಾಗಿದೆ. ಜೆಡಿಎಸ್ನ ಡಬ್ಬಲ್ ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಗೌರಿಶಂಕರ್ ಮತ್ತು ಮಂಜುನಾಥ್ ಜತೆಗೆ ಇನ್ನೂ ಬಹಳ ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ನಿಮಗೆ ನಾಚಿಕೆ ಆಗಲ್ವೇ?
ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ಕೊಟ್ಟಾಗ ಅವನ್ನು ಟೀಕಿಸಿದ್ದ ಪ್ರಧಾನಿಗಳು ಈಗ “ಮೋದಿ ಗ್ಯಾರಂಟಿ” ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರೇ, ನಿಮಗೆ ನಾಚಿಕೆ ಆಗತ್ತೋ ಇಲ್ವೋ ಎಂದು ಪ್ರಶ್ನಿಸಿದರು.
ರಾಜ್ಯದ, ಕನ್ನಡ ನಾಡಿನ ಜನತೆಯ ಹಣ ಇರುವ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿಯವರು ತಮ್ಮ ಕಾರ್ಯಕ್ರಮ ಎಂದು ಬಿಂಬಿಸಿ ಪ್ರಚಾರ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ರಾಜ್ಯದ ಜನತೆಯ ಮತ್ತು ನಮ್ಮಗಳ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಸಿಎಂ ಆಗುವುದನ್ನು ಕುಮಾರಸ್ವಾಮಿ ಸಹಿಸಲಿಲ್ಲ:
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಈ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರೆ, ಮುಂಬೈಯಿಂದ ಮರಳಿ ಬರುವುದಾಗಿ ಗೋಪಾಲಯ್ಯ ಮತ್ತು ಎಸ್.ಟಿ.ಸೋಮಶೇಖರ್ ಫೋನ್ ಮಾಡಿ ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ನನ್ನ ಹೆಸರು ಹೇಳಲಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ 40 ಜನ ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಅನ್ನುವ ಕುಮಾರಸ್ವಾಮಿ ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಪಕ್ಷದ 19 ಶಾಸಕರ ಬೆಂಬಲ ನೀಡುತ್ತೇವೆ ಅನ್ನುತ್ತಾರೆ. ಅವರ ಮಾತು ಕೇಳಲು ನಾವೇನು ದಡ್ಡರೇ? ಸರ್ಕಾರಕ್ಕೆ ನಮ್ಮ ಪಕ್ಷದ 136 ಜನ ಶಾಸಕರು ಮತ್ತು ಪಕ್ಷೇತರರ ಬೆಂಬಲವಿದೆ. ಕುಮಾರಸ್ವಾಮಿ ಅವರೇ ಎನ್ ಡಿಎಯಿಂದ ಮೊದಲು ಹೊರಬನ್ನಿ, ಒಬ್ಬ ವ್ಯಕ್ತಿಗೆ ಸ್ಪಷ್ಟವಾದ ರಾಜಕೀಯ ನಿಲುವು ಇರಬೇಕು ಎಂದು ಅವರಿಗೆ ಹೇಳಿದೆ. ನಂತರ ಈ ಕುರಿತು ನಾನು ಹೆಚ್ಚು ಪ್ರತಿಕ್ರಿಯೆ ನೀಡಲು ಹೋಗಲೇಇಲ್ಲ.
ಕುಮಾರಸ್ವಾಮಿ ಅವರ ದ್ವಂದ್ವ ನಿಲುವು ಅವರಿಗೆ ಅರ್ಥವಾಗುತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಸೇರಿದ್ದಾರೆ, ತೆಲಂಗಾಣದಲ್ಲಿ ಕೆಸಿಆರ್ಗೆ ಪರವಾಗಿ ಮಾತನಾಡುತ್ತಾರೆ. ಕೆಸಿಆರ್ ಅವರ ಮಗ ಮೋದಿ ಅವರನ್ನು ಸುಳ್ಳ ಎಂದು ಕರೆಯುತ್ತಾರೆ. 18 ಜನ ಶಾಸಕರನ್ನು ಕರೆದುಕೊಂಡು, ಅವರನ್ನು ಖುರ್ಚಿಯಿಂದ ಇಳಿಸಿದವರ ಜತೆಗೆ ಮಿಲನವಾಗಿದ್ದೇವೆ, ಸಂಸಾರ ನಡೆಸುತ್ತೇವೆ ಎಂದರೆ ಸಿದ್ದಾಂತ ಎನ್ನುವುದು ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದರು.
ಗೌರಿಶಂಕರ್ ಪಕ್ಷ ಸೇರ್ಪಡೆ ಬಗ್ಗೆ ಪರಮೇಶ್ವರ್, ವಾಸಣ್ಣ ಹಾಗೂ ರಾಜಣ್ಣ ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡಿದ್ದೇನೆ. ಬೇರೆ ತಾಲೂಕು ಹಾಗೂ ಕ್ಷೇತ್ರಗಳಲ್ಲೂ ಅನೇಕರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ. ಪಕ್ಷದ ಅಧ್ಯಕ್ಷರು ಹಾಗೂ ನಾಯಕರು ನಮಗೆ ಶಕ್ತಿ ನೀಡಿದರೆ ಮತ್ತಷ್ಟು ಪ್ರಮುಖರನ್ನು ಪಕ್ಷಕ್ಕೆ ಸೇರುವಂತೆ ಮಾಡಿ ಶಕ್ತಿ ತುಂಬುತ್ತೇವೆ. ನಾವು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಬೇಕಿದೆ. ಈಗಾಗಲೇ ನಮಗೆ ಯಾವ ರೀತಿ ತೊಂದರೆ ಕೊಡಬೇಕು ಎಂದು ನಿನ್ನೆಯಿಂದಲೇ ಆರಂಭವಾಗಿದೆ. ಅದಕ್ಕೆ ನಾವು ಚಿಂತೆ ಮಾಡುವ ಅಗತ್ಯವಿಲ್ಲ. ನಾವು ನೇರವಾಗಿ ಯುದ್ಧ ಮಾಡೋಣ. ನಾವೆಲ್ಲರೂ ಒಮ್ಮತವಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟೋಣ ಎಂದು ಹೇಳಿದರು.