ಬೆಂಗಳೂರು, ನ. 15 ನ್ಯತ್ಯದ ಮೂಲಕ ಸಹೋದರತ್ವ, ಪ್ರೀತಿಯ ಸಂದೇಶ ಸಾರಿದ ರಾಜಭವನದ ಸಿಬ್ಬಂದಿ, ಬುಧವಾರ ಜಾರ್ಖಂಡ್ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಜಾರ್ಖಂಡ್ ರಾಜ್ಯದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ವರ್ಣರಂಜಿತ ಮತ್ತು ಆಕರ್ಷಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಜಾರ್ಖಂಡ್ ರಾಜ್ಯದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ವಿವಿಧ ವರ್ಣರಂಜಿತ ಮತ್ತು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ದಿನ ಪ್ರಸ್ತುತಪಡಿಸಲಾಯಿತು. ಈ ಅದ್ಭುತವಾಗಿ ಪ್ರದರ್ಶನ ನೀಡಿದ ಎಲ್ಲಾ ಕಲಾವಿದರನ್ನು ಅಭಿನಂದಿಸಿದರು.
ಏಕ ಭಾರತ, ಅತ್ಯುತ್ತಮ ಭಾರತ ಎಂಬ ಚಿಂತನೆಯ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಇಂತಹ ಕಾರ್ಯಕ್ರಮಗಳಿಗೆ ಬೆಂಬಲಿಸುತ್ತಿದ್ದಾರೆ. ಅವರ ಪ್ರೇರಣೆಯಿಂದ, ಪ್ರತಿ ರಾಜ್ಯಗಳ ಸಂಸ್ಥಾಪನಾ ದಿನವನ್ನು ಇತರ ರಾಜ್ಯಗಳಲ್ಲಿಯೂ ಆಚರಿಸಲಾಗುತ್ತಿದೆ, ಇದು ನಮ್ಮ ದೇಶದ ಅನನ್ಯ ಅಸ್ಮಿತೆಯನ್ನು, ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಮತ್ತೊಂದು ರಾಜ್ಯದ ಸಂಸ್ಥಾಪನಾ ದಿನವನ್ನು ಆಚರಿಸುವುದು ಸಾಮಾಜಿಕ ಏಕೀಕರಣ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು.
ಅಭಿವೃದ್ಧಿ ಮತ್ತು ಸ್ಮರಣೆಯ ಕನಸುಗಳೊಂದಿಗೆ, 23 ವರ್ಷಗಳಲ್ಲಿ ಹೊಸ ಜಾರ್ಖಂಡ್ ಅರಳಿತು ಮತ್ತು ಇಲ್ಲಿನ ಜನರು ಅಭಿವೃದ್ಧಿ ಹೊಂದುವುದನ್ನು ಕಂಡಿದ್ದಾರೆ. ಜಾರ್ಖಂಡ್ ಸಂಸ್ಥಾಪನಾ ದಿನವನ್ನು ಪ್ರತಿ ವರ್ಷ ನ. 15 ರಂದು ಆಚರಿಸಲಾಗುತ್ತದೆ ಮತ್ತು ಅದೇ ದಿನ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಹೆಮ್ಮೆಯ ದಿನವಾಗಿ ಆಚರಿಸಲಾಗುತ್ತದೆ. ಜಾರ್ಖಂಡ್ ರಾಜ್ಯವು ನೈಸರ್ಗಿಕ ಸಂಪನ್ಮೂಲಗಳು ಮತ್ತು ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಯುರೇನಿಯಂ, ಅಡುಗೆ ಕಲ್ಲಿದ್ದಲು ಮತ್ತು ಪೈರೈಟ್ ಅನ್ನು ಉತ್ಪಾದಿಸುವ ಏಕೈಕ ರಾಜ್ಯವಾಗಿದೆ. ದೇಶದ ಪ್ರಗತಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಜಾರ್ಖಂಡ್ ರಾಜ್ಯವು ಮಹತ್ವದ ಕೊಡುಗೆ ನೀಡಿದೆ ಎಂದು ಮಾಹಿತಿ ನೀಡಿದರು.
ಮೊದಲಿಗೆ ಜಾರ್ಖಂಡ್ ರಾಜ್ಯಪಾಲರ ವೀಡಿಯೋ ಸಂದೇಶವನ್ನು ಹಾಗೂ ಜಾರ್ಖಂಡ್ ರಾಜ್ಯ ಕುರಿತ ಮಾಹಿತಿನ್ನು ಪ್ರದರ್ಶಿಸಲಾಯಿತು. ನಂತರ ತಿಷಾ ಶರ್ಮಾ ಮತ್ತು ಅನಿಕಾ ತಂಡದಿಂದ ಗಣಪತಿ ವಂದನಾ, ನಮನ್, ಆಧಿತ್ಯಾ ತಂಡದವರಿಂದ ವಂದೇ ಮಾತರಂ, ರಿತಿಕಾ ತಂಡದಿಂದ ರಾಧ ಘರ್ ಮೋರೆ ಗೀತೆಗೆ ನ್ಯತ್ಯ, ಜಾರ್ಖಂಡ್ ಬುಡುಕಟ್ಟು ನೃತ್ಯವನ್ನು ಪ್ರಸ್ತುತಿಪಡಿಸಲಾಯಿತು.
ವಿಶೇಷವಾಗಿ ರಾಜಭವನದ ಸಿಬ್ಬಂದಿಗಳಾದ ಜಯಶ್ರೀ ಮತ್ತು ನಂದಿನಿ ಅವರಿಂದ ನಾವೆಲ್ಲರೂ ಒಂದೇ, ಒಂದೇ ನಾಡಿನ ಮಕ್ಕಳು, ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆ ತುಂಬುವಂತಹ ನೃತ್ಯರೂಪಕ ಸುಂದರವಾಗಿ ಮೂಡಿಬಂತು.