ಸುದ್ದಿಮೂಲ ವಾರ್ತೆ
ಹೊಸಕೋಟೆ,ನ.19: ಹೊಸಕೋಟೆ – ಸರ್ಜಾಪುರ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆಯಲ್ಲಿ ಗುಂಡಿಗಳಿಗೆ ಹೆದ್ದಾರಿ ಪ್ರಾಧಿಕಾರ ಜಲ್ಲಿ ಕಲ್ಲುಗಳನ್ನು ತುಂಬಿದ್ದು ಬಿಟ್ಟರೆ ಡಾಂಬರೀಕರಣ ಮಾಡಿಲ್ಲ ಈ ರಸ್ತೆಯಲ್ಲಿ ಅತಿ ಹೆಚ್ಚು ವಾಹನ ಸಂಚಾರದಿಂದ ಹಳ್ಳಗಳಿಗೆ ಹಾಕಿದ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಹರಡಿ ದ್ವಿಚಕ್ರ ಸವಾರರಿಗೆ ತುಂಬಾ ತೊಂದರೆ ಆಗಿದೆ. ಈ ರಸ್ತೆಯ ಎಡ ಭಾಗದಲ್ಲಿ ಕೋಲಾರಕ್ಕೆ ಕೆ.ಸಿ ವ್ಯಾಲಿ ಪೈಪುಗಳನ್ನು ಹಾಕಿರುವ ಜಾಗದಲ್ಲಿ ಮಳೆಗಾಲವಾದ್ದರಿಂದ ನೀರು ತುಂಬಿ ಹತ್ತಾರು ಮೀಟರ್ಗಳು ಒಂದು ಅಡಿಗೂ ಹೆಚ್ಚು ಗುಂಡಿಗಳು ಬಾಯ್ತೆರೆದುಕೊಂಡಿವೆ.
ಕಾಟಾಚಾರಕ್ಕೆ ಜಲ್ಲಿ ತುಂಬಿಸಿ ಕೈತೊಳೆದು ಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆ ನಿಂತಿದ್ದು ಜಲ್ಲಿ ಹಾಕಿರುವ ಗುಂಡಿಗಳಿಗೆ ಡಾಂಬರೀಕರಣ ಮಾಡಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ಸಾರ್ವಜನಿಕರ ಅಗ್ರಹಿಸಿದ್ದಾರೆ.