ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ನ. 19: ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ರವರನ್ನು ಶಿಡ್ಲಘಟ್ಟದ ಬಿಜೆಪಿ ಮುಖಂಡರು ಭೇಟಿ ಮಾಡಿ ಅಭಿನಂದಿಸಿದ್ದಾರೆ. ಈ ವೇಳೆ ಶಿಡ್ಲಘಟ್ಟ ವಿಧಾನ ಸಭೆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಕುರಿತು ಚರ್ಚಿಸಿದ್ದಾರೆ.
ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ರವರ ನೇತೃತ್ವದಲ್ಲಿ ತೆರಳಿದ ಮಾಜಿ ಶಾಸಕ ಎಂ.ರಾಜಣ್ಣ ಇನ್ನಿತರರ ತಂಡವು ಬೆಂಗಳೂರಿನ ಜಾಲಹಳ್ಳಿಯಲ್ಲಿನ ಅವರ ನಿವಾಸದಲ್ಲಿ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದ್ದಾರೆ.
ಈ ವೇಳೆ ಮಾತನಾಡಿದ ಸೀಕಲ್ ರಾಮಚಂದ್ರಗೌಡ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಸಂಘಟಿಸಬೇಕಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಕೆ ಆಗುವಂತೆ ಈಗಿನಿಂದಲೇ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲಾಗುವುದು ಅದಕ್ಕೆ ನಿಮ್ಮ ಬೆಂಬಲ ಸಹಕಾರ ಇರಬೇಕೆಂದು ಮನವಿ ಮಾಡಿದರು.
ಕೇಂದ್ರ ಸರಕಾರದ ಜನಪರ ಎಲ್ಲಾ ಯೋಜನೆಗಳ ಬಗ್ಗೆ ಕ್ಷೇತ್ರದ ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸುವುದು, ಅರ್ಹರಿಗೆ ಸೌಲಭ್ಯ ಸಿಗುವಂತೆ ಮಾಡುವ ಕೆಲಸವನ್ನು ಕ್ಷೇತ್ರದಲ್ಲಿ ಈಗಾಗಲೇ ಮಾಡುತ್ತಿದ್ದು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡಲಿದ್ದೇವೆ ಎಂದರು.
ಮೋದಿ ಅವರ ಸಾಧನೆಗಳು, ದೂರದೃಷ್ಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಅನ್ಯ ಪಕ್ಷಗಳಿಂದಲೂ ನಮ್ಮ ಪಕ್ಷದತ್ತ ಮತದಾರರನ್ನು ಸೆಳೆಯುವ ಕೆಲಸ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಸಂಘಟನಾತ್ಮಕವಾಗಿ ನಿರಂತರವಾಗಿ ನಡೆಸುತ್ತಿದ್ದೇವೆಂದು ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯ ಸ್ಥಿತಿಗತಿಗಳನ್ನು ವಿವರಿಸಿದ್ದಾರೆ.
ಈ ವೇಳೆ ಕೋಲಾರ ಸಂಸದ ಎಸ್.ಮುನಿಸ್ವಾಮಿ,ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಆನಂದಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ,ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಚಿಂತಾಮಣಿಯ ಗೋಪಿನಾಥ್ ಇನ್ನಿತರರು ಹಾಜರಿದ್ದರು.