ಸುದ್ದಿಮೂಲ ವಾರ್ತೆ
ಮೈಸೂರು, ನ.24:ಮೈಸೂರಿನ ಪ್ರತಿಷ್ಠಿತ ನಾಟ್ಯ ಸಂಸ್ಥೆ ಪ್ರತಿವರ್ಷ ಕನ್ನಡ ರಾಜ್ಯೊತ್ಸವದ ಅಂಗವಾಗಿ ನೀಡುವ ಕನ್ನಡ ಕಲಾರತ್ನ ಪ್ರಶಸ್ತಿಗೆ ನಾಡಿನ ಖ್ಯಾತ ಜಾನಪದಗಾಯಕ ಲಕ್ಷ್ಮಿರಾಮ್ ಅವರನ್ನು ಸಂಗೀತ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ನ.26 ರಂದು ಮೈಸೂರಿನ ರೋಟರಿ ಸಭಾ೦ಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ನಾಟ್ಯ ಸಂಸ್ಥೆಯ ಸಂತೋಷ್ ಕಲಾವಿದ ತಿಳಿಸಿದ್ದಾರೆ.
ಲಕ್ಮೀರಾಮ್ ಮೂಲತ: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ನಾಡಪ್ಪನಹಳ್ಳಿಯವರು.ಕಳೆದ 2 ದಶಕಗಳಿಂದ ಕನ್ನಡ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ .ಸಾವಿರಕ್ಕೂ ಹೆಚ್ಚು ಗಾಯನ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಅಲ್ಲದೆ, ಮಹಾರಾಷ್ಟ್ರ ದ ನಾಗಪುರ, ಉತ್ತರಪ್ರದೇಶದ ಕಾಶಿ, ತಿರುಪತಿ, ಛತ್ತಿಸ್ ಗಡದ ರಾಯ್ ಪುರ ಹೀಗೆ ಹಲವು ಕಡೆಗಳಲ್ಲಿ ನೀಡಿದ್ದಾರೆ. ಕರ್ನಾಟಕದ ಹಲವು ವಿಶ್ವ ವಿದ್ಯಾಲಯಗಳ ವಿವಿಧ ಕಾಲೇಜುಗಳ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಸಾಳೆ, ಜಾನಪದ ಗೀತೆ, ಭಾವ ಗೀತೆ, ದೇಶ ಭಕ್ತಿಗೀತೆಗಳ ತರಬೇತಿ ನೀಡಿದ್ದಾರೆ.
ಹಾಗೆಯೇ ಬುದ್ಧ, ಬಸವಣ್ಣ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ , ಕುವೆಂಪು ಕುರಿತ 300 ಕ್ಕೂ ಹೆಚ್ಚಿನ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ ಕಲಾಸೇವೆ ಗುರುತಿಸಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಸೇರಿದಂತೆ ಮೈಸೂರು ರತ್ನ ಪ್ರಶಸ್ತಿ, ಕೆನರಾ ಬ್ಯಾಂಕ್ ವಿಶೇಷ ಕಲಾಕಾರ್ , ಧಮ್ಮ ಸೇವಾ ರತ್ನ ಪ್ರಶಸ್ತಿ, ಆದಿ ಜನ ರಾಯಬಾರಿ, ಕನ್ನಡ ವಿಕಾಸ ರತ್ನ, ಕರುನಾಡ ಭೂಷಣ, ಕರುನಾಡ ರತ್ನ ಮುಂತಾದ ಪ್ರಶಸ್ತಿ ಪುರಸ್ಕಾರ ಗಳು ಸಂದಿವೆ .