ಸುದ್ದಿಮೂಲ ವಾರ್ತೆ
ಕೆ.ಆರ್.ಪುರ.ನ.27: ಕನ್ನಡ ನಾಡಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು ಆಗುವ ಸ್ಥಿತಿಗೆ ಬಂದು ತಲುಪುತ್ತಿದ್ದೇವೆ ಎಂದು ಸಮಾಜ ಸೇವಕ ಕುಂಬೇನ ಅಗ್ರಹಾರ ರಾಮಾಂಜನೇಯ ಅವರು ಕಳವಳ ವ್ಯಕ್ತಪಡಿಸಿದರು.
ಕ್ಷೇತ್ರದ ಬೆಳತೂರು ಕಾಲೋನಿಯಲ್ಲಿ ಕರುನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಭೌಗೋಳಿಕ, ಪ್ರಾಕೃತಿಕ ಉತ್ತಮ ವಾತಾವರಣ ಹೊಂದಿದ್ದು, ವಿವಿಧ ರಾಜ್ಯಗಳಿಂದ ಉದ್ಯೋಗ ಶೈಕ್ಷಣಿಕ ಇನ್ನಿತರ ಕಾರಣಗಳಿಂದ ಬಂದು ನೆಲೆಸಲು ಅನುಕೂಲವಾಗಿದೆ. ಅನ್ಯ ಭಾಷಿಕರ ಪ್ರಭಾವದಿಂದ ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಅನ್ಯ ಭಾಷಿಕರ ಜೊತೆ ವ್ಯವಹರಿಸುವಾಗ ಕನ್ನಡ ಭಾಷೆಯ ಬದಲು ಅವರದೇ ಭಾಷೆ ಮಾತನಾಡುವ ಪ್ರವೃತ್ತಿ ಹೆಚ್ಚಾಗಿ ಇದು ಒಳ್ಳೆಯ ಬೆಳವಣಿಗೆಯಲ್ಲ ಮುಂದಿನ ದಿನಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾ ತರಾಗಿ ಕನ್ನಡಿಗರನ್ನು ಹುಡುಕುವ ಪರಿಸ್ಥಿತಿ ಬರಬಹುದು ಕನ್ನಡ ಭಾಷೆ ಉಳಿಸಿ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜ ಸೇವಕ ಬೆಳತೂರು ರಮೇಶ್ ಮಾತನಾಡಿ, ಬೇರೆ ರಾಜ್ಯಗಳಿಂದ ಬಂದಿರುವ ಪರಭಾಷಿಕರಿಗೆ ನಾವು ಜವಾಬ್ದಾರಿಯಿಂದ ಕನ್ನಡ ಕಲಿಸಲು ಮುಂದಾಗಬೇಕು ಎಂದರು. ಸುಮಾರು ಎರಡು ಸಾವಿರ ವರ್ಷ ಇತಿಹಾಸ ಇರುವ ಕನ್ನಡ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡಿಗರಿಗೆ ಹೆಮ್ಮೆಪಡುವ ವಿಷಯ. ಪ್ರತಿಯೊಬ್ಬ ಕನ್ನಡ ನಾಡು ಪರಂಪರೆಯ ಉಳಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟುಪುಸ್ತಕ, ಪೆನ್ಸಿಲ್,ಬ್ಯಾಗು ಹಾಗು ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರುನಾಡು ಹಿತರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾದ್ಯಕ್ಷ ಜ್ಯೋತಿ ಕುಮಾರ್ ಆಚಾರ್, ಓಬಳೇಶ್, ರಾಮಾಂಜಿನೇ ಯ, ಬೆಳತೂರ್ ರಮೇಶ್, ಬೈಯ್ಯಪ್ಪನಹಳ್ಳಿ ರಮೇಶ್, ಗೋಪಾಲ್ ಕುಟ್ಟಿ,ಮಂಜುನಾಥ್, ಭಾಗ್ಯರವರು, ಶೋಭಮ್ಮ, ಶಿವಕುಮಾರ್ ನಾಯ್ಡು, ರೈತರ ಸಂಘದ ಅಧ್ಯಕ್ಷರು ಮೆಹಬೂಬ್, ರಾಧಾ ಉಮೇಶ್ ಹಾಗು ಇತರರು ಹಾಜರಿದ್ದರು.